
ಮಡಿಕೇರಿ NEWS DESK ಮಾ.9 : ವಿಶ್ವರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಕ್ಕೊತ್ತಾಯ ಮಂಡಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ವಿವಿಧ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ವಿಶ್ವರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿ, ಜಾಗತಿಕ ಮಹಿಳಾ ಸಬಲೀಕರಣದ ಕಾರ್ಯಾಂಗ ನಿರ್ದೇಶಕರು, ಯುನೆಸ್ಕೋದ ಮಹಾ ನಿರ್ದೇಶಕರು, ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ಮಹಿಳೆಯರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಪಕ್ಷಪಾತ, ತಾರತಮ್ಯವನ್ನು ಕೊನೆಗೊಳಿಸಲು ಮತ್ತು ಲಿಂಗ ಸಮಾನತೆಯನ್ನು ಸಾಧಿಸುವ ಪ್ರಯತ್ನಗಳನ್ನು ಪ್ರೇರೇಪಿಸಲು ಇದು ಸಹಕಾರಿಯಾಗಿದೆ ಎಂದರು. ‘ಫಾರ್ ಆಲ್ ವುಮೆನ್ ಅಂಡ್ ಗರ್ಲ್ಸ್ : ರೈಟ್ಸ್, ಇಕ್ವಾಲಿಟಿ, ಎಂಪವರ್ ಮೆಂಟ್’ ಎಂಬ ಥೀಮ್‌ನಡಿಯಲ್ಲಿ ಸಿಎನ್‌ಸಿ ಹಕ್ಕೊತ್ತಾಯಗಳ ಪರಿಗಣನೆಯು ಕೊಡವ ಮಹಿಳೆಯರ ಪಾಲಿನ ನಿಜವಾದ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೊಡವ ಕುಲ ರಚನೆಯ ಶೌರ್ಯ, ಮಾನವೀಯ ವಿಧಾನ ಮತ್ತು ರಕ್ತಸಂಬಂಧವನ್ನು ಅಭಿವೃದ್ಧಿಪಡಿಸುವಲ್ಲಿ ಕೊಡವ ಮಹಿಳೆಯರು ನಿಸ್ವಾರ್ಥವಾಗಿ ನೀಡಿದ ಕೊಡುಗೆ, ಆದರ್ಶವಾದವನ್ನು ಜಿಒಐ, ಜಿಒಕೆ ಮತ್ತು ನಮ್ಮ ದೇಶದ ಜನರು ಅನುಸರಿಸಬೇಕು. ಕೊಡವ ಮಹಿಳೆಯರಲ್ಲಿ ಅಂತರ್ಗತವಾಗಿರುವ ಆ ಗುಣವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಮತ್ತು ಅಳವಡಿಸಿಕೊಂಡರೆ ದೇಶದಲ್ಲಿ ಮಹಿಳೆಯರು ಯಾವುದೇ ಶೋಷಣೆ, ದೌರ್ಜನ್ಯ ಮತ್ತು ಗುಲಾಮಗಿರಿಯಿಂದ ಹೊರಬರಬಹುದು. ಕೊಡವ ಮಹಿಳೆಯರು ಬುದ್ಧಿವಂತಿಕೆ ಮತ್ತು ಉದಾರತೆಗೆ ಮಾದರಿಯಾಗಿದ್ದಾರೆ ಎಂದರು. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕುಗಳನ್ನು ನೀಡಬೇಕು. ಸ್ವಾಯತ್ತ ಕೊಡವ ಲ್ಯಾಂಡ್ ಘೋಷಿಸಬೇಕು, ನೆಲ, ಜಲ, ಭಾಷೆ, ಸಂಸ್ಕೃತಿ, ಪರಪಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಂವಿಧಾನಿಕ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು. ಕೊಡವರ ಜನ್ಮಸಿದ್ಧ ಹಕ್ಕಾಗಿರುವ ಕೋವಿ ಹೊಂದುವ ವಿನಾಯಿತಿಯನ್ನು ಶಾಶ್ವತಗೊಳಿಸಬೇಕು. ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು, ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಅಂತರಾಷ್ಟ್ರೀಯ ಕಾನೂನು ಮತ್ತು ಎಸ್‌ಟಿ ವರ್ಗೀಕರಣದ ಅಡಿಯಲ್ಲಿ ವಿಶ್ವರಾಷ್ಟ್ರ ಸಂಸ್ಥೆ ಆದಿಮಸಂಜಾತ ಸಮಾವೇಶದಲ್ಲಿ ಮಾನ್ಯತೆ ಕಲ್ಪಿಸಬೇಕು. ದೇಶಾದ್ಯಂತ ಕೊಡವ ಮಹಿಳೆಯರಿಗೆ ಶೇ.33 ಮೀಸಲಾತಿ ಆಂತರಿಕ ಕೋಟಾದಡಿ ನೀಡಬೇಕು. ಸ್ವಾಧೀನಪಡಿಸಿಕೊಂಡಿರುವ ಮತ್ತು ಅಡಮಾನ ಇಟ್ಟಿರುವ ಪೂರ್ವಜರ ಪರಂಪರೆಯ ಆಸ್ತಿಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಕೊಡವ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ತೋರಿ 10 ಎಕರೆ ಕಾಫಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು. ಕೊಡಗಿನಲ್ಲಿ ಪ್ರತಿಯೊಬ್ಬ ಕೊಡವತಿಯರಿಗೆ 5 ಎಕರೆ ಭೂಮಿಯನ್ನು ಕಡ್ಡಾಯವಾಗಿ ನೀಡುವುದು ಸಮರ್ಥನೀಯವಾಗಿದೆ. ಈ ಕ್ರಮವು ಆರ್ಥಿಕತೆಯಲ್ಲಿ ತೀವ್ರ ಮೇಲ್ಮುಖ ಬದಲಾವಣೆಯನ್ನು ತರಬಹುದು ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಸೇನಾ ಸಂಪರ್ಕವಿಲ್ಲದ ಕೊಡವ ಕುಟುಂಬವಿಲ್ಲ, ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ವ್ಯಕ್ತಿ ಭಾರತೀಯ ಸೇನೆಯಲ್ಲಿದ್ದಾರೆ. ಆದ್ದರಿಂದ ಪುರುಷರು ಸೇನಾ ಸೇವೆಯಲ್ಲಿರುವಾಗ ಅವರ ಕುಟುಂಬವನ್ನು ಪೋಷಿಸಲು ಮತ್ತು ಸ್ವಾವಲಂಬಿ, ಸಂತೃಪ್ತ ಜೀವನ ಪೂರೈಸಲು ಅವರಿಗೆ ಸರ್ಕಾರಿ ಭೂಮಿಯನ್ನು ನೀಡಬೇಕಾಗುತ್ತದೆ. ಯುದ್ಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮಹಿಳೆಯರು ತಂದೆ, ಗಂಡ ಮತ್ತು ಪುತ್ರರ ಅನುಪಸ್ಥಿತಿಯಲ್ಲಿ ಬಳಲುತ್ತಿರುತ್ತಾರೆ. ಕೊಡವ ಮಹಿಳೆಯರ ಈ ಆಘಾತಕಾರಿ ಅಧ್ಯಾಯವನ್ನು ಕೇವಲ ಮೆಚ್ಚುಗೆಯಿಂದ ಮಾತ್ರ ಸರಿದೂಗಿಸಲು ಸಾಧ್ಯವಿಲ್ಲ. ಕೊಡವ ಮಹಿಳೆಯರು ಈ ಹಿಂದೆಯೂ ಕಷ್ಟ ಅನುಭವಿಸಿದರು ಮತ್ತು ಈಗಲೂ ಸಹ ಬಳಲುತ್ತಿದ್ದಾರೆ. ಆದ್ದರಿಂದ ಅವರಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಬೇಕು ಎಂದರು. ದೇಶದ ಹೊಸ ಸಂಸತ್ತಿನಲ್ಲಿ ಕೊಡವ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಬೇಕು. ಸರ್ಕಾರವು ಯುದ್ಧೋಪಾದಿಯಲ್ಲಿ ಕೊಡವ ಮಹಿಳೆಯರಿಗೆ ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ನೀಡಬೇಕು. ಶೇ.80ರಷ್ಟು ಕೊಡವ ಬುಡಕಟ್ಟು ಜನಾಂಗದ ಮಂದಿ ಬಡತನದಲ್ಲಿದ್ದಾರೆ. ಆದ್ದರಿಂದ ಕೊಡವತಿ ವಧುವಿಗೆ “ಪತ್ತಾಕ್ ಭಾಗ್ಯ”ವನ್ನು ನೀಡಬೇಕು. “ಸೀಮಂತ ಭಾಗ್ಯ”ಕ್ಕೆ ಬದಲಾಗಿ ಬಡ ಕೊಡವತಿ ಗರ್ಭಿಣಿಯರಿಗೆ “ಕೂಪದಿ ಕೂಳ್ ಭಾಗ್ಯ” ಘೋಷಿಸಬೇಕು. ಕೊಡವ ವಿದ್ಯಾರ್ಥಿನಿಯರು ಹಾಗೂ ಕೊಡವ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ವೇತನ ಸಹಿತ ರಜೆ ನೀಡುವ ಕಾನೂನನ್ನು ಸಂಸತ್ತಿನಲ್ಲಿ ಜಾರಿಗೆ ತರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ ಗಿರೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ರೇಖಾ ನಾಚಪ್ಪ, ಅಪ್ಪಚ್ಚಿರ ರೀನಾ ರಮ್ಮಿ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಅರೆಯಡ ಸವಿತಾ ಗಿರೀಶ್, ಮುದ್ದಿಯಡ ಲೀಲಾವತಿ, ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಬಾಚಿರಾಣಿಯಂಡ ಚಿಪ್ಪಣ್ಣ, ಕಿರಿಯಮಾಡ ಶೆರಿನ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ಚೋಳಪಂಡ ನಾಣಯ್ಯ, ಬಾಚಿನಾಡಂಡ ಗಿರಿ, ಕೂಪದಿರ ಸಾಬು, ನಂದಿನೆರವಂಡ ವಿಜು, ತೋಲಂಡ ಸೋಮಯ್ಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಪಟ್ರಪಂಡ ಸೋಮಣ್ಣ ಪಾಲ್ಗೊಂಡಿದ್ದರು.









