
ಮಡಿಕೇರಿ ಮಾ.10 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎಸ್ ಎಸ್ ಎಸ್ ಘಟಕ ಉದ್ಘಾಟಿಸಲಾಯಿತು. ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಲೋಗೋ ಅನಾವಣಗೊಳಿಸುವ ಮೂಲಕ ಉದ್ಘಾಟಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1969 ರಲ್ಲಿ ಎನ್ ಎಸ್ ಎಸ್ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ, ದೇಶದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ. ಎನ್ ಎಸ್ ಎಸ್ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದ್ದು, ಅದೆಷ್ಟೋ ನಾಯಕರನ್ನು ರಾಷ್ಟ್ರಕ್ಕೆ ನೀಡಿದೆ. ನನಗಲ್ಲ ನಿನಗೆ ಎನ್ನುವ ಧ್ಯೇಯವನ್ನಿಟ್ಟುಕೊಂಡು ಸಮಾಜವನ್ನು ತಿದ್ದುವುದರೊಂದಿಗೆ, ಯಾವುದೇ ಆಕಾಂಕ್ಷೆಯನ್ನಿಟ್ಟುಕೊಳ್ಳದೆ ಇತರರಿಗಾಗಿ ಬದುಕುವುದನ್ನು ಧಾರೆಯೆರೆಯುವ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ ಕುರಿತು ಹೆಮ್ಮೆಯೆನಿಸುತ್ತದೆ ಎಂದರು. ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ. ಪಿ.ಎ.ಗೀತಾಂಜಲಿ ಮಾತನಾಡಿ ಎನ್ ಎಸ್ ಎಸ್ ನಾನು ಸೇವೆಗೆ ಸಿದ್ದ ಎನ್ನುವುದನ್ನು ಸೂಚಿಸುತ್ತದೆ. ಕಡೆಂಗೋಡ್ಲು ಶಂಕರಭಟ್ಟ ಅವರು ಬರೆದ ಸಾಲುಗಳಾದ ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎನ್ನುವುದನ್ನು ಉಲ್ಲೇಖಿಸಿ ರಾಷ್ಟ್ರೀಯ ಸೇವಾ ಯೋಜನೆಯ ಅವಕಾಶಗಳನ್ನು ಸದಾ ಬಳಸಿಕೊಳ್ಳಬೇಕು. ಇದರಿಂದ ನಮ್ಮ ಜೀವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ. ಎ.ಎನ್.ಗಾಯತ್ರಿ ಮಾತನಾಡಿ, ನಿಸ್ವಾರ್ಥವಾಗಿ ನಾವು ಸಮಾಜಕ್ಕೆ ಸೇವೆ ಸಲ್ಲಿಸುತ್ತೇವೆ ಎನ್ನುವುದಾದರೆ ಅದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಂದ ಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಮುಂದಾಗಬೇಕು. ಸಮಾಜದ ಸಮಸ್ಯೆಗಳನ್ನು ನಿವಾರಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮಾಡಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಎನ್ ಎಸ್ ಎಸ್ ಘಟಕಗಳ ಯೋಜನಾಧಿಕಾರಿ ಡಾ. ಕೆ.ಶೈಲಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಎನ್ ಎಸ್ ಎಸ್ ವತಿಯಿಂದ ನಡೆದ ಹಾಗೂ ಇನ್ನು ಮುಂದೆ ನಡೆಯಲಿರುವ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಸೇವ ಯೋಜನೆಯ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು. ಬಳಿಕ ಸ್ವಯಂ ಸೇವಕರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜಿನ ಬೋಧಕ ಸಿಬ್ಬಂಧಿಗಳಾದ ಡಾ.ಪ್ರದೀಪ್ ಭಂಡಾರಿ, ಡಾ.ಸೌಮ್ಯಶ್ರಿ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕ ಚರಣ್ ಬಲ್ಯದ, ವಿದ್ಯಾರ್ಥಿ ನಾಯಕರಾದ ಟಿ.ವಿ.ವರ್ಷ, ಬಿ.ವಿ.ಮಧುಸೂದನ್, ಮನೋಜ್, ಕೆ.ಟಿ.ವರ್ಷ ಹಾಜರಿದ್ದರು. ಎನ್ ಎಸ್ ಎಸ್ ಘಟಕಗಳ ಯೋಜನಾಧಿಕಾರಿ ಅಲೋಕ್ ಬಿ.ಜೈ ವಂದಿಸಿದರು.









