
ಮಡಿಕೇರಿ ಮಾ.11 NEWS DESK : ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಮದಲಾಪುರದ ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಚೌಡೇಶ್ವರಿ ದೇವರ ವಾರ್ಷಿಕ ಮಹಾಪೂಜೆ ಶ್ರದ್ದಾಭಕ್ತಿಯಿಂದ ನೆರವೇರಿತು. ಎರಡು ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಸೋಮವಾರಪೇಟೆ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಮಹಾಸ್ವಾಮಿ ಹಾಗೂ ಅಖಿಲಭಾರತ ಸಂತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಗುರೂಜೀ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು. ಧಾರ್ಮಿಕವಾಗಿ ಹಿಂದೂ ಧರ್ಮ ಶ್ರೇಷ್ಠ ಧರ್ಮ. ಸಂಸ್ಕಾರಯುತ ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಕಟಿಬದ್ದರಾಗಬೇಕಿದೆ. ಜೀವನದೊಂದಿಗೆ ಧರ್ಮದ ಅಭಿವೃದ್ದಿಗೆ ಕೂಡ ಎಲ್ಲರೂ ಮುಂದಾಗಬೇಕಿದೆ. ಮೌಲ್ಯಗಳು ಅಡಕಗೊಂಡಿರುವ ಹಿಂದೂ ಧರ್ಮ ಹೊರತುಪಡಿಸಿ ಇತರೆ ಧರ್ಮದತ್ತ ಮುಖಮಾಡದಂತೆ ನಿಶ್ಚಲ ನಿರಂಜನ ಸ್ವಾಮೀಜಿ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಹಿಂದೂಗಳ ನೆಮ್ಮದಿಯ ಜೀವನಕ್ಕೆ ಸನಾತನ ಧರ್ಮ ಉಳಿಯಬೇಕಿದೆ. ಹಸಿರು ಉಳಿದರೆ ಉಸಿರು ಎನ್ನುವ ನಾಣ್ಣುಡಿ ಇಂದು ದೇಶದೆಲ್ಲೆಡೆ ಅತ್ಯಗತ್ಯವಾಗಿದೆ. ಆದರೆ ಹಿಂದೂಗಳು ನದಿ, ಮರ ಪರಿಸರವನ್ನು ಪ್ರೀತಿಸಿ ಉಳಿಸುವ ಕೆಲಸ ಅನಾದಿ ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ. ಬೇರೆ ಧರ್ಮಗಳಿಗೆ ಮಾರು ಹೋಗಬಾರದು. ಜೀವನದ ಉನ್ನತಿಗೆ ತಂದೆ ತಾಯಿಯ, ಗುರು ಹಿರಿಯರ ಆಶೀರ್ವಾದ ಸದಾ ಅಗತ್ಯ ಎಂದ ಅವರು, ಮುಂದಿನ ದಿನಗಳಲ್ಲಿ ಪೂಜೋತ್ಸವ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಹಾರೈಸಿದರು. ಕಡ್ಡಾಯವಾಗಿ ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡುವಂತೆ ಅವರು ದಿಡ್ಡಳ್ಳಿ ನಿವಾಸಿಗಳಿಗೆ ಕರೆ ನೀಡಿದರು. ರಾಜೇಶ್ ನಾಥ್ ಸ್ವಾಮೀಜಿ ಮಾತನಾಡಿ, ದಿಡ್ಡಳ್ಳಿ ನಿರಾಶ್ರಿತರು ಈ ಶಿಬಿರಕ್ಕೆ ಆಗಮಿಸುವ ಮುನ್ನವೇ ಮುನೇಶ್ವರ ಹಾಗೂ ಚೌಡೇಶ್ವರಿ ದೇವಿ ಒಡಮೂಡಿ ನಿಮ್ಮನ್ನು ಸ್ವಾಗತಿಸಿದ್ದಾರೆ. ಶಿಬಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಕೈಗೊಂಡು ಹಿಂದೂ ಧರ್ಮದ ಬೆಳವಣಿಗೆಯಲ್ಲಿ ತಾವೆಲ್ಲರೂ ಪಾತ್ರ ವಹಿಸಬೇಕಿದೆ ಎಂದರು. ಕೂಡಿಗೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನವೀನ್ ಭಟ್ ತಂಡ ಪೂಜಾ ವಿಧಿವನ್ನು ನೆರವೇರಿಸಿದರು. ಈ ಸಂದರ್ಭ ಶ್ರೀ ಚೌಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಸಿದ್ದು ಪ್ರಮುಖರಾದ ರವಿ, ಮುತ್ತಣ್ಣ, ಮಂಜೇಶ್, ಭೋಜ, ವನವಾಸಿ ಕಲ್ಯಾಣದ ತಾಲ್ಲೂಕು ಕಾರ್ಯದರ್ಶಿ ಹರ್ಷ, ಉದ್ಯಮಿ ಸುಗುರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.









