
ಮಡಿಕೇರಿ ಮಾ.11 NEWS DESK : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಎಸ್.ಸಿ, ಎಸ್.ಟಿ ಸಮಿತಿಯ ವತಿಯಿಂದ ನಮ್ಮ ನಡಿಗೆ ಸಮುದಾಯದ ಕಡೆಗೆ ಶೀರ್ಷಿಕೆಯಡಿಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿಯ ಮರಪಾಲ ಹಾಡಿಯಲ್ಲಿ ಹಾಡಿ ನಿವಾಸಿಗಳಿಗೆ ವಿಶೇಷ ಉಪನ್ಯಾಸ, ಹಾಡಿ ಭೇಟಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಮರಪಾಲ ಅಂಗನವಾಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಪಿ.ಸಿ.ರಾಮು ಉದ್ಘಾಟಿಸಿ ಭಿತ್ರಿಪತ್ರವನ್ನು ಬಿಡುಗಡೆ ಮಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಹಾಡಿಯ ಅರಿವು ಹಾಗೂ ಹಾಡಿಯ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು. ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ರಘುರಾಜ್ ಸಮುದಾಯದ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಹಾಡಿಯಜನರು ಒಳ್ಳೆಯ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ದಯಾನಂದ, ಹಾಡಿಯಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಅರಿವು ಬಹಳ ಮುಖ್ಯ. ವಿದ್ಯಾರ್ಥಿಗಳಿಂದ ಪ್ರತಿ ಆರು ತಿಂಗಳಿಗೊಮ್ಮೆ ಹಾಡಿಯ ಜನರ ನೋವು ನಲಿವುಗಳನ್ನು ಅಧ್ಯಾಯನ ಮಾಡಲು ಹಾಗೂ ಕಾಲೇಜನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ವೃಂದದವರ ಮೂಲಕ ಹಾಡಿಯ ಅಭಿವೃದ್ಧಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಮರಪಾಲ ಹಾಡಿಯ ಅಧ್ಯಕ್ಷ ರಾಜು, ಹಿರಿಯರಾದ ಸುಬ್ಬು, ಕಾಲೇಜಿನ ಎಸ್.ಸಿ, ಎಸ್.ಟಿ ಸಮಿತಿಯ ಸಂಚಾಲಕಿ ಕೆ.ಜಿ.ಧನ್ಯ, ನಿರ್ವಹಣಾಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಮ್ಮಯ್ಯ ತಬಾಸಂ, ಮರಪಾಲ ಅಂಗನವಾಡಿ ಶಿಕ್ಷಕಿ ಮಲ್ಲಿಗೆ ಸೇರಿದಂತೆ ಹಾಡಿಯ ನಿವಾಸಿಗಳು ಹಾಗೂ ಮಕ್ಕಳು ಹಾಜರಿದ್ದರು. ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಕೀರ್ತನ ಸ್ವಾಗತಿಸಿದರು. ಅರ್ಚನ ವಂದಿಸಿದರು. ಕೀರ್ತನ ನಿರೂಪಿಸಿದರು. ನಂತರ ವಿದ್ಯಾರ್ಥಿಗಳು ನೃತ್ಯದ ಮೂಲಕ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸಿದರು.









