
ಮೈಸೂರು NEWS DESK ಏ. 18: ಕರ್ನಾಟಕ ಸಾಂಸ್ಕೃತಿಕ ಹಾಗೂ ಪಾರಂಪರಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮವನ್ನು ತೀವ್ರವಾಗಿ ಖಂಡಿಸಿರುವ *ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ಅವರು ಈ ಸಂಬಂಧ ನಿರ್ಧಾರ ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಜರಾಬಾದ್ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವೃತ್ತದ ಬಳಿ 40 ಮರಗಳನ್ನು ಕಡಿದಿರುವ ಬಗ್ಗೆ ಇನ್ನಷ್ಟು ಮರಗಳಿಗೆ ಕೊಡಲಿ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಯದುವೀರ್ ಒಡೆಯರ್, “ಮರ”ಮೇಧ ನಿಲ್ಲಿಸಲು ನಡೆಯುತ್ತಿರುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸಾಧುವಲ್ಲ. ಪರಿಸರ ಹಾಗೂ ಪ್ರಕೃತಿಯನ್ನು ಸಂರಕ್ಷಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಮರಗಳನ್ನು ಕಡಿಯಲು ಬಿಡುವುದಿಲ್ಲ. ಒಂದು ವೇಳೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ತಿಳಿಸಿದರೆ ಇದಕ್ಕೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ. ಪರಿಸರ ತಜ್ಞರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹವನ್ನು ಪ್ರಮುಖವಾಗಿ ಪಡೆದುಕೊಳ್ಳಬೇಕು. ಇದು ಕಡ್ಡಾಯವಾಗಿ ನಡೆಯಲೇಬೇಕು ಎಂದು ಯದುವೀರ್ ವಿವರಿಸಿದ್ದಾರೆ. ಮೈಸೂರಿನ ನಗರ ಪರಿಸರ ಮತ್ತು ಸಾಂಸ್ಕೃತಿಕ ಸೊಬಗು ಹಾಳು ಮಾಡಿ ಅಭಿವೃದ್ಧಿ ಕಾರ್ಯ ಮಾಡುವುದು ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ದಿನಾಂಕ ನಿಗದಿಪಡಿಸಿ, ಕಾಲಾವಕಾಶ ಹಾಗೂ ನೋಟಿಸ್ ನೀಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. ಮೈಸೂರಿನ ನಗರದಲ್ಲಿ ಹರಡಿಕೊಂಡಿರುವ ಪ್ರಾಕೃತಿಕ ವೈಭವಕ್ಕೆ ಧಕ್ಕೆ ತರಬಾರದು. ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿ ಹಾಗೂ ಪರಿಸರ ಸರಂಕ್ಷಣೆಗೆ ಆದ್ಯತೆ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ಸಂಸದ ಯದುವೀರ್ ಒಡೆಯರ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮರಗಳ ಮಾರಣ ಹೋಮದ ವಿರುದ್ಧ ಈಗಾಗಲೇ ಎಲ್ಲೆಡೆ ಕೂಗು ಎದ್ದಿದೆ. ಇದು ಈಗ ಪ್ರತಿಭಟನೆ ರೂಪ ಪಡೆದುಕೊಳ್ಳುತ್ತಿದೆ. ಈ ಹೋರಾಟದಲ್ಲೂ ನಾನು ಕೂಡ ಪರಿಸರ ಪ್ರೇಮಿಗಳ ಪರವಾಗಿ ನಿಂತಿದ್ದೇನೆ. ನಮ್ಮ ಮೈಸೂರಿನ ಸೌಂದರ್ಯ ಹಾಳಾಗಲು ಬಿಡುವುದಿಲ್ಲ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಅಧಿಕಾರಿಗಳು ಸೂಕ್ತ ದಿನಾಂಕ ಮಾಡಲಿ. ನಂತರ ಮುಂದಿನ ಕ್ರಮ ಕೈಗೊಳ್ಳಲಿ. *ಯದುವೀರ್ ಒಡೆಯರ್*









