
ಮಡಿಕೇರಿ ಮೇ 16 NEWS DESK : ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಬೋಡ್ ನಮ್ಮೆ ಮೇ 17 ಹಾಗೂ 18ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತಿಹಾಸ ಪ್ರಸಿದ್ಧದ ಹಳ್ಳಿಗಟ್ಟು ಬೋಡ್ ನಮ್ಮೆ ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿಯನ್ನು ಹೊಂದಿದ್ದು, ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖ ಮಾಡಿ ನಿಂತಿರುವ ದಕ್ಷಿಣ ಭಾರತದ ಏಕೈಕ ದೇವಸ್ಥಾನ ಕೂಡ ಇದಾಗಿದೆ. ಮೇ 17 ರಂದು ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಪೂಜೆ ಹಾಗೂ ರಾತ್ರಿ ಮನೆಕಳಿ ನಡೆಯಲಿದ್ದು, ಮೇ 18ರಂದು ಸಂಜೆ ಕುದುರೆ, ಮೊಗ ಹಾಗೂ ಪರಸ್ಪರ ಕೆಸರಿನ ಎರಚಾಟ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹಬ್ಬದ ಆಚರಣೆ: ಮೇ 17ರಂದು ಬೆಳಿಗ್ಗೆ ಹಬ್ಬದ ವಿವಿಧ ಆಚರಣೆಗಳನ್ನು ನಡೆಸುವ ಮೂಲನಿವಾಸಿ ಪಣಿಕ ಜನಾಂಗದ ವ್ಯಕ್ತಿ ಊರು ತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಗೆ ಆಗಮಿಸಿ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ನಂತರ ಮಧ್ಯಾಹ್ನ 2-30 ರಿಂದ ಚಮ್ಮಟೀರ ಬಲ್ಯಮನೆಯಿಂದ ಪೊಲವಪ್ಪ ತೆರೆ ಹೊರಟು ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲ, ಕೂಕಂಡ ಹಾಗೂ ಚೇಂದಿಮಾಡ ಕುಟುಂಬಸ್ಥರ ಅಂಬಲದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಯುತ್ತದೆ. ಇದೇ ಸಂದರ್ಭ ಮೂಕಳೇರ ಬಲ್ಯಮನೆ ಸಮೀಪದ ದೇವರ ಕೆರೆಯಲ್ಲಿ ಇಬ್ಬರು ಕೊಡವ ಪೂಜಾರಿಗಳು (ಚಮ್ಮಟೀರ ಹಾಗೂ ಮೂಕಳೇರ) ಉಪವಾಸವಿದ್ದು, ಪೂಜಾವಿಧಿ ವಿಧಾನಗಳನ್ನು ಪೂರೈಸಿ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ 4-30 ಸುಮಾರಿಗೆ ಮೂಕಳೇರ ಬಲ್ಯಮನೆಯಿಂದ ಹೊರಟು ಹತ್ತಿರದ ಪೊಲವಂಡ ಕೋಟದಲ್ಲಿ ಸೇರಿ ಅಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ಬಳಿಕ ಜೋಡುಬೀಟಿ ಸಮೀಪದ ಗುಂಡಿಯತ್ ಅಯ್ಯಪ್ಪ ದೇವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ಪೂರೈಸುತ್ತಾರೆ. ಇಲ್ಲಿ ದೇವರಿಗೆ ಅವುಲ್ ಹಾಕುವುದರೊಂದಿಗೆ ಸಾವಿರಾರು ಈಡುಕಾಯಿ ಹಾಕುತ್ತಾರೆ. ಈ ಎರಡೂ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದ್ದು, ಇಬ್ಬರು ಕೊಡವ ಪೂಜಾರಿಗಳು ವಿವಿಧ ಪೂಜಾ ಕಾರ್ಯಗಳನ್ನು ಪೂರೈಸುತ್ತಾರೆ. ರಾತ್ರಿ 11ಗಂಟೆಗೆ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ವಿವಿಧ ವೇಷದಾರಿಗಳು ಹಾಗೂ ಸಾಂಪ್ರದಾಯಿಕ ಬೋಡ್ ನಮ್ಮೆ ದೋಳು ಹಾಗು ಹಾಡಿನೊಂದಿಗೆ ರಾತ್ರಿಯಿಡಿ ಊರಿನ ಮೂರು ಐನ್ ಮನೆಗಳಿಗೆ ತೆರಳುತ್ತಾರೆ. ಮೇ 18 ರಂದು ಮುಂಜಾನೆಯಿಂದಲೇ ಚಮ್ಮಟೀರ ಹಾಗೂ ಮೂಕಳೇರ ಬಲ್ಯಮನೆಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಸೇರಿದಂತೆ ಎರಡು ಐನ್ ಮನೆಗಳಲ್ಲಿ ತಲಾ ಒಂದೊಂದು ಕುದುರೆ ಹಾಗೂ ಮೊಗಗಳ ಶೃಂಗಾರ ನಡೆಯುತ್ತದೆ. ಮಧ್ಯಾಹ್ನ 3 ಗಂಟೆಯ ಒಳಗೆ ಚಮ್ಮಟೀರ ಬಲ್ಯಮನೆಯಿಂದ ಒಂದು ಕುದುರೆ ಹಾಗೂ ಮೊಗ ಹೊರಟು ಶ್ರೀ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲ ಸೇರುತ್ತದೆ. ಇದೇ ಸಂದರ್ಭ ಮೂಕಳೇರ ಬಲ್ಯಮನೆಯಿಂದ ಒಂದು ಕುದುರೆ ಹಾಗೂ ಮೊಗ ಹೊರಟು ಸಂಜೆ 4-30 ಗಂಟೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಸಮೀಪದ ಅಂಬಲದಲ್ಲಿ ಸೇರಿ ಪರಸ್ಪರ ಜನರು ಕೆಸರು ಎರಚಾಡಿಕೊಳ್ಳುತ್ತಾರೆ. ಈ ಸಂದರ್ಭ ಮಹಿಳೆಯರಿಗೆ ಸೇರಿದಂತೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೆ ಮುಕ್ತವಾಗಿ ಕುಣಿಯಲು ಅವಕಾಶವಿದ್ದು ಒಂದು ಬೆತ್ತದ ಕೋಲು ನೀಡಲಾಗುತ್ತದೆ ಅಂತಹವರಿಗೆ ಕೆಸರು ಎರಚುವಂತಿಲ್ಲ. ಪರಸ್ಪರ ಕೆಸರು ಎರಚಾಟದ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಹಬ್ಬವು ಸಂಪನ್ನಗೊಳ್ಳುತ್ತದೆ ಎಂದು ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.










