
ಮಡಿಕೇರಿ ಮೇ 16 NEWS DESK : ತಲಕಾವೇರಿಯಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಕೋಟಿ ರುದ್ರ ಜಪಯಜ್ಞದಲ್ಲಿ ಕಾವೇರಮ್ಮ ಕೊಡವ ಮತ್ತು ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುದ್ದಂಡ.ಬಿ.ದೇವಯ್ಯ ಭಾಗಿಯಾದರು. ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜ್ ಸ್ವಾಮೀಜಿ ಅವರ ಸಂಕಲ್ಪದಂತೆ ಲೋಕ ಕಲ್ಯಾಣಕ್ಕಾಗಿ ಜೀವನದಿ ಕಾವೇರಿಯ ಉಗಮಸ್ಥಾನದಲ್ಲಿ ನಡೆಯುತ್ತಿರುವ ಕೋಟ್ಯಾಧಿಕ ರುದ್ರ ಜಪಯಜ್ಞ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂ.ಬಿ.ದೇವಯ್ಯ ಅವರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಜಿಲ್ಲೆ ಹಾಗೂ ನಾಡಿನ ಸಮಸ್ತರಿಗೂ ಒಳಿತಾಗಲಿ, ಕಾವೇರಿ ಮಾತೆ ಉತ್ತರೋತ್ತರ ಶ್ರೇಯಸನ್ನು ನೀಡಲಿ, ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾರತಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಕಾವೇರಿ ಕ್ಷೇತ್ರದಲ್ಲಿ ನಡೆಯುತ್ತಿರಲಿ ಎಂದು ಆಶಿಸಿದರು. ಮೇ 11 ರಿಂದ ತಲಕಾವೇರಿಯಲ್ಲಿ ಕೋಟಿ ರುದ್ರ ಜಪಯಜ್ಞ ನಡೆಯುತ್ತಿದ್ದು, ಸುಮಾರು 25 ವೈಧಿಕರಿಂದ ದಿನ ಪೂರ್ತಿ ಮಂತ್ರಪಠಣವಾಗುತ್ತಿದೆ. ಕಳೆದ 4-5 ದಿನಗಳಿಂದಲೂ ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಕ್ತರಲ್ಲಿ ಹರ್ಷ ಮೂಡಿದೆ.









