
ಮಡಿಕೇರಿ NEWS DESK ಜೂ.1 : ಕೊಡಗಿನ ಪತ್ರಕರ್ತ ಪ್ರಶಾಂತ್ ಟಿ.ಆರ್ ವಿರಚಿತ ‘ಬಾಳ ಹಾದಿಯಲಿ ಬೆಳ್ಳಿಚುಕ್ಕಿ’ ಕಾದಂಬರಿಗೆ ಈ ಸಾಲಿನ ಇಂಡಿಯನ್ ಐಕಾನ್ ಅವಾರ್ಡ್ ಸಂದಿದೆ. ಒರಿಯಂಟಲ್ ಫೌಂಡೇಶನ್ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಇಂಡಿಯನ್ ಐಕಾನ್ ರಾಷ್ಟçಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಈ ಬಾರಿಯೂ ಪ್ರಶಸ್ತಿ ಪ್ರಕಟಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಾಂತ್.ಟಿ.ಆರ್ ವಿರಚಿತ ಬಾಳ ಹಾದಿಯಲಿ ಬೆಳ್ಳಿಚುಕ್ಕಿ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ. ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆಯ ಕುರಿತ ಕಥಾವಸ್ತು ಈ ಕಾದಂಬರಿಯಲ್ಲಿ ಅಡಕವಾಗಿದೆ. ವಿಶೇಷ ಎಂದರೆ ಖ್ಯಾತ ನಟ ಅನಿರುದ್ಧ್ ಜಟ್ಕರ್ ಬೆನ್ನುಡಿ ಬರೆದಿದ್ದಾರೆ. ಬಾಲಿವುಡ್ ನಟ ಹಾಗೂ ಕ್ರಿಕೆಟಿಗ ಭಾಸ್ಕರ್ ಮುನ್ನುಡಿ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇದೇ ಜೂ.15ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ಫಲಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಪ್ರಶಾಂತ್ ಟಿ.ಆರ್ ಅವರು ವಿಶ್ವವಾಣಿ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ರಚಿಸಿದ ಹೊನ್ನಮ್ಮನ ಕನಸು ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿತ್ತು. ಈಗ ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ ಕಾದಂಬರಿ’ ಇಂಡಿಯನ್ ಐಕಾನ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.










