
ಸೋಮವಾರಪೇಟೆ NEWS DESK ಆ.12 : ಸಿ ಆ್ಯಂಡ್ ಡಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು, ಆಸ್ತಿ ದುರಸ್ತಿ ವಿಳಂಬವನ್ನು ಖಂಡಿಸಿ ತಾಲ್ಲೂಕು ರೈತ ಹೋರಾಟ ಸಮಿತಿ ಹಾಗು ಕೊಡಗು ರೈತ ಸಂಘ ಮಂಗಳವಾರ ಕರೆ ನೀಡಿದ್ದ ಸೋಮವಾರಪೇಟೆ ತಾಲ್ಲೂಕು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಗ್ರಾಮೀಣ ಭಾಗದ ರೈತರು ಬೆಳಿಗ್ಗೆಯೇ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್, ಸಂಚಾಲಕ ಬಿ.ಜೆ.ದೀಪಕ್, ಪ್ರಮುಖರಾದ ಎಸ್.ಜಿ.ಮೇದಪ್ಪ, ಕೆ.ಎಂ.ಲೋಕೇಶ್ ಕುಮಾರ್, ಬಿ.ಪಿ.ಅನಿಲ್, ಹರಗ ಮಿಥುನ್, ಕೂತಿ ದಿವಾಕರ್, ಕೆ.ಎಂ.ದಿನೇಶ್ ಅವರುಗಳ ನೇತೃತ್ವದಲ್ಲಿ ವಿವೇಕಾನಂದ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಬೀಟಿಕಟ್ಟೆ ಜಂಕ್ಷನ್‌ನಲ್ಲಿ ರೈತ ಹೋರಾಟ ಸಮಿತಿ ಹಾಗು ರೈತ ಸಂಘದ ಎಸ್.ಬಿ.ಭರತ್‌ಕುಮಾರ್, ಜಿ.ಎಂ.ಹೂವಯ್ಯ, ಬಿ.ಪಿ.ಮೊಗಪ್ಪ, ಗೋಪಾಲ್‌ಕೃಷ್ಣ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದರು ಗೌಡಳ್ಳಿ, ಚೌಡ್ಲು, ತೋಳೂರುಶೆಟ್ಟಳ್ಳಿ, ಕಲ್ಕಂದೂರು-ಕೂಡುರಸ್ತೆ, ಮಾದಾಪುರ, ಕುಂಬೂರು, ಅಬ್ಬೂರುಕಟ್ಟೆ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿದರು. ಸೋಮವಾರಪೇಟೆ ಪಟ್ಟಣದಲ್ಲಿ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿದ್ದರು. ಖಾಸಗಿ ಬಸ್‌ಗಳು, ಆಟೋ, ಬಾಡಿಗೆ ವಾಹನಗಳು ರಸ್ತೆಗಿಳಿಯದೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲೂ ಅಂಗಡಿಗಳನ್ನು ಮುಚ್ಚಿ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕೆಲವು ಕಡೆ ಮರಗಳನ್ನು ಕಡಿದು ರಸ್ತೆ ಹಾಕಲಾಗಿತ್ತು. ಕೆಲ ಕಡೆ ವಾಹನ ಚಕ್ರದ ಗಾಳಿ ಬಿಟ್ಟ ಘಟನೆ ನಡೆಯಿತು. ವಾಹನಗಳಿಗೆ ಸೈಕಲ್ ಪಂಪ್‌ಗಳಿAದ ಗಾಳಿ ತುಂಬಿಸುಕೊಂಡು ಚಾಲಕರು ತೆರಳಿದರು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪರದಾಡಿದರು. ಸರ್ಕಾರಿ ಕಚೇರಿಗಳು ಸಿಬ್ಬಂದಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವೂ ಇರಲಿಲ್ಲ.
ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ ಪ್ರತಿಭಟನಕಾರರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಕೃಷಿ ಭೂಮಿಯನ್ನು ಸಿ ಆ್ಯಂಡ್ ಡಿ ಎಂದು ಸರ್ವೆ ಮಾಡುತ್ತಿದ್ದಾರೆ. ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೃಷ್ಣಮೂರ್ತಿ ಹಾಗೂ ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಅವರೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗು ಅರಣ್ಯ ಸಂರಕ್ಷಣಾಧಿಕಾರಿ ಆಗಮಿಸಬೇಕು. ರೈತ ಹೋರಾಟದ ಮನವಿ ಪತ್ರವನ್ನು ಪಡೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ವೆಂಕಟರಾಜ, ಎಎಸ್‌ಪಿ ಬಿ.ಪಿ.ದಿನೇಶ್ ಕುಮಾರ್, ಎಸಿಎಫ್ ಗೋಪಾಲ್ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಬೇಡಿಕೆ ಆಲಿಸಿದರು. ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿ ಮಾಡಿಕೊಂಡಿರುವ ಸಿ ಆ್ಯಂಡ್ ಡಿ ಜಾಗವನ್ನು ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಕೃಷಿ ಭೂಮಿಯನ್ನು ಸಿ ಆ್ಯಂಡ್ ಭೂಮಿ (ಕೃಷಿಗೆ ಯೋಗ್ಯವಲ್ಲದ ಭೂಮಿ) ಎಂದು ವರದಿ ನೀಡಿದ್ದಾರೆ. ಇಂತಹ ಅವೈಜ್ಞಾನಿಕ ವರದಿಯಿಂದ ರೈತರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೃಷಿ ಭೂಮಿಗೆ ಹಕ್ಕುಪತ್ರಗಳು ಸಿಗುತ್ತಿಲ್ಲ. ಅರಣ್ಯ ಇಲಾಖೆಯವರು ಕೃಷಿ ಭೂಮಿಯನ್ನೇ ಸಿ ಆ್ಯಂಡ್ ಡಿ ಎಂದು ಸೆಕ್ಷನ್ -4 ಸರ್ವೆಗೆ ಮುಂದಾಗಿದ್ದಾರೆ. ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿದರೆ, ರೈತರ ಗುಳೇ ಹೋಗಬೇಕಾಗುತ್ತದೆ ಎಂದು ಹೇಳಿದರು. ಮುಂಗಾರು ಅಧಿವೇಶನದಲ್ಲಿ ಸಿ ಆ್ಯಂಡ್ ಡಿ ಭೂಮಿ ವಿಷಯದಲ್ಲಿ ಚರ್ಚೆ ಆಗಬೇಕು. ರೈತ ಮುಖಂಡರು ಸೇರಿದಂತೆ ಉನ್ನತ ಮಟ್ಟದ ಸಮಿತಿ ರಚನೆ ಆಗಬೇಕು. ಅರಣ್ಯ ಹಾಗು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಆಗಬೇಕು. ಆ.18 ರ ಒಳಗೆ ಅಧಿವೇಶನದಲ್ಲಿ ಚರ್ಚೆಯಾಗಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರೊಂದಿಗೆ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ವೆಂಕಟರಾಜು ಮಾತನಾಡಿ, ಸಿ ಆ್ಯಂಡ್ ಡಿ ಭೂಮಿ ವಿಷಯದಲ್ಲಿ ಎಲ್ಲಾ ಮಾಹಿತಿ ಸಂಗ್ರಹಿಸಲಾಗಿದೆ. ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿರುವುದು, ವಾಸದ ಮನೆಗಳಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರೈತಾಪಿ ವರ್ಗಕ್ಕೆ ತೊಂದರೆಯಾಗಬಾರದೆಂಬುದು ಜಿಲ್ಲಾಡಳಿತದ ಆಶಯವೂ ಆಗಿದೆ. ಜಂಟಿ ಸರ್ವೆಯ ಸಂದರ್ಭ ಗ್ರಾಮಸ್ಥರಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. *ಅಭಿಪ್ರಾಯ* >> ಕೊಡಗು ಜಿಲ್ಲೆಯಲ್ಲಿ ಅರಣ್ಯ ಭೂಮಿ ಎಷ್ಟಿದೆ, ಅದರಲ್ಲಿ ಸಿ ಆ್ಯಂಡ್ ಡಿ, ಮತ್ತು ಪೈಸಾರಿ ಭೂಮಿ ಎಷ್ಟಿದೆ? ಎಲ್ಲಿದೆ? ಎಂಬುದನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ 35 ಸಾವಿರ ಸಿ ಆ್ಯಂಡ್ ಡಿ ಭೂಮಿ ಇದೆ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಸರ್ಕಾರ ಜಂಟಿ ಸರ್ವೆಗೆ ಅದೇಶ ನೀಡುವ ತನಕ ಅರಣ್ಯ ಇಲಾಖೆಯವರು ಸರ್ವೆಗೆ ಬರಬಾರದು. (ಬಿ.ಜೆ.ದೀಪಕ್, ಸಂಚಾಲಕ, ರೈತ ಹೋರಾಟ ಸಮಿತಿ) ರೈತರು ಕೃಷಿ ಮಾಡಿದ ಸಿ ಆ್ಯಂಡ್ ಡಿ ಭೂಮಿಗಾದರೂ ಹಕ್ಕುಪತ್ರ ಕೊಡಬೇಕು. ಸಿ ಆ್ಯಂಡ್ ಡಿ ಭೂಮಿಯನ್ನು ಆರಣ್ಯೀಕರಣ ಮಾಡುವುದನ್ನು ಸರ್ಕಾರ ತಡೆಯಬೇಕು. ನಮ್ಮ ಸರ್ಕಾರ ವಿದ್ದಾಗ ಸಿ ಆ್ಯಂಡ್ ಡಿ ಭೂಮಿ ಜಾಗಕ್ಕೂ ಹಕ್ಕುಪತ್ರ ನೀಡಲಾಗಿದೆ. ಒಟ್ಟು 9 ಸಾವಿರ ಹಕ್ಕುಪತ್ರ ನೀಡಿದ್ದೇವೆ. (ಅಪ್ಪಚ್ಚು ರಂಜನ್, ಮಾಜಿ ಶಾಸಕ)









