
ಮಡಿಕೇರಿ NEWS DESK ಆ.17 : ಕೊಡಗು ಜಿಲ್ಲೆಯಲ್ಲಿ ಮತ್ತೆ ಗಾಳಿ ಸಹಿತ ಮಳೆ ಬಿರುಸುಗೊಂಡಿದ್ದು, ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಗೆ ಆ.18 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ಕಳೆದ ಎರಡು ತಿಂಗಳುಗಳ ವ್ಯಾಪಕ ಮಳೆಯಿಂದ ತೀವ್ರ ಹಾನಿ ಅನುಭವಿಸಿದ್ದ ಕೊಡಗಿನಲ್ಲಿ ಒಂದೆರಡು ದಿನ ಮಳೆ ಬಿಡುವು ನೀಡಿತ್ತು. ಆದರೆ ಭಾನುವಾರದಿಂದ ಮತ್ತೆ ಗಾಳಿ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದೆ. ಗಾಳಿ ಸಹಿತ ಮಳೆ ಸುರಿಯುತ್ತಿರುವುದರಿಂದ ಕೆಲವು ಭಾಗಗಳಲ್ಲಿ ಮರ, ಬರೆ, ವಿದ್ಯುತ್ ಕಂಬ ಬಿದ್ದ ಘಟನೆಗಳು ನಡೆದಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಎತ್ತರ ಮತ್ತು ತಗ್ಗು ಪ್ರದೇಶ ಹಾಗೂ ನದಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ರಜೆಯ ಕಾರಣ ಜಿಲ್ಲೆಗೆ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ನಿರಂತರ ಮಳೆಯಿಂದ ಪ್ರವಾಸಿತಾಣಗಳಿಗೆ ತೆರಳಲಾಗದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಮಡಿಕೇರಿ ತಾಲ್ಲೂಕಿನಲ್ಲಿ ಮಂಜು ಕವಿದ ವಾತಾವರಣವಿದ್ದು, ಮೈಕೊರೆಯುವ ಚಳಿ ಸಹಿತ ಗಾಳಿ ಮಳೆಯಾಗುತ್ತಿದೆ. ದಟ್ಟ ಮಂಜು ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಬಸ್ ಗಳ ಸಂಚಾರದ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕರಿಕೆ, ಸಂಪಾಜೆ, ಗಾಳಿಬೀಡು, ಕಾಲೂರು, ಮಡಿಕೇರಿ ನಗರ, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ದಕ್ಷಿಣ ಕೊಡಗಿನ ಹುದಿಕೇರಿ, ಶ್ರೀಮಂಗಲ ಭಾಗದಲ್ಲಿ ತೀವ್ರ ಮಳೆಯಾಗುತ್ತಿದೆ. ಸಂಪಾಜೆ ಹೋಬಳಿಯ ಹೆರವನಾಡು ಗ್ರಾಮದ ಕೇಟೋಳಿ ಮೋಹನ್ ರಾಜ್ ಎಂಬುವವರ ಕೊಟ್ಟಿಗೆಯ ಮೇಲೆ ವಿದ್ಯುತ್ ಕಂಬ ಬಿದ್ದು ಸಂಪೂರ್ಣ ಹಾನಿಯಾಗಿದೆ. ಶಾಂತಳ್ಳಿ ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ ಮರ ಬಿದ್ದಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸರಾಸರಿ 44.76ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 53.60 ಮಿ.ಮೀ., ವಿರಾಜಪೇಟೆ 34.6, ಸೋಮವಾರಪೇಟೆ 67.95, ಪೊನ್ನಂಪೇಟೆ 42.25, ಕುಶಾಲನಗರ 25.40 ಮಿ.ಮೀ. ಮಳೆೆ ದಾಖಲಾಗಿದೆ. ಹೋಬಳಿವಾರು ಮಡಿಕೇರಿ 55, ನಾಪೋಕ್ಲು 41.2, ಸಂಪಾಜೆ 77, ಭಾಗಮಂಡಲ 41.2 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ 41.2, ಅಮ್ಮತ್ತಿ 28, ಸೋಮವಾರಪೇಟೆ 38.2, ಶನಿವಾರಸಂತೆ 76, ಶಾಂತಳ್ಳಿ 76, ಕೊಡ್ಲಿಪೇಟೆ 82.6, ಪೊನ್ನಂಪೇಟೆ 23, ಹುದಿಕೇರಿ 41.9, ಶ್ರೀಮಂಗಲ 83, ಬಾಳೆಲೆ 21.09, ಕುಶಾಲನಗರ 16.8, ಸುಂಟಿಕೊಪ್ಪ 34 ಮಿ.ಮೀ. ಮಳೆಯಾಗಿದೆ.








