
ಮಡಿಕೇರಿ ಸೆ.1 NEWS DESK : ಕುಶಾಲನಗರದಲ್ಲಿ ಗಣೇಶ ವಿಸರ್ಜನೋತ್ಸವದ ಸಂದರ್ಭ ನಿಯಮ ಉಲ್ಲಂಘಿಸಿ ಅಧಿಕ ಶಬ್ದ ಬಳಕೆ ಮಾಡಿದ ಹಿನ್ನೆಲೆ ಪ್ರೆಶರ್ ಮಿಡ್ ಸ್ಪೀಕರ್ ಮತ್ತು 5 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ.31 ರಂದು ಕುಶಾಲನಗರದಲ್ಲಿ ನಡೆದ ಗಣೇಶ ವಿಸರ್ಜನೋತ್ಸವದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ನಿಗದಿ ಪಡಿಸಿರುವ ಶಬ್ದ ಮಿತಿಯನ್ನು ಮೀರಿ ಶಬ್ದ ಬಳಸಲಾಗಿತ್ತು. ಮೆರವಣಿಗೆಯಲ್ಲಿ ಪ್ರ್ರೆಶರ್ ಮಿಡ್ ಸ್ಪೀಕರ್ ಅಳವಡಿಸಿದ 5 ಸೌಂಡ್ ಸಿಸ್ಟಂ ವಾಹನದ ಚಾಲಕರುಗಳ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಅತೀ ಹೆಚ್ಚು ಶಬ್ದವನ್ನು ಹೊರ ಹೊಮ್ಮಿಸುವ ಪ್ರೆಶರ್ ಮಿಡ್ ಸ್ಪೀಕರ್‍ಗಳನ್ನು ಸೌಂಡ್ ಸಿಸ್ಟಂನಲ್ಲಿ ಬಳಸದಂತೆ ಕುಶಾಲನಗರ ಪೊಲಿಸರು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಹೀಗಿದ್ದೂ ಅತೀ ಹೆಚ್ಚಿನ ಶಬ್ದ ಹೊರ ಹೊಮ್ಮಿಸುವ ಪ್ರ್ರೆಶರ್ ಮಿಡ್ ಸ್ಪೀಕರ್ ಹೊಂದಿದ ಸೌಂಡ್ ಸಿಸ್ಟಂಗಳನ್ನು ಬಳಸಲಾಗಿದೆ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.








