

ಮಡಿಕೇರಿ NEWS DESK ಸೆ.2 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಫಿ ವರ್ಕ್ಸ್ ಒಂದರಲ್ಲಿ ಸುಮಾರು 7 ಸಾವಿರ ಕೆ.ಜಿ. ಕಾಫಿ ಕಳವು ಮಾಡಿದ ಪ್ರಕರಣವನ್ನು ಭೇದಿಸಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು, ಮಾಲು ಸಹಿತ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಲುಕುಪ್ಪೆ ಗ್ರಾಮದ ಸುನಿಲ್ ಆರ್.(34), ರಾಜು ಆರ್.(24), ಶರತ್ ಆರ್ (24), ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ದಿನೇಶ್ ರಾವತ್(44) ಹಾಗೂ ಪೂರ್ವ ಚಂಪಾರಣ್ ಜಿಲ್ಲೆಯ ಜಿತೇಂದ್ರ ಕುಮಾರ್ ರಾಮ್(38) ಬಂಧಿತ ಆರೋಪಿಗಳು. ಬಂಧಿತರಿಂದ 6495 ಕೆ.ಜಿ. ಕಾಫಿ, 1 ಕಾರು, 2 ದ್ವಿಚಕ್ರ ವಾಹನ, ಹಾಗೂ ಒಂದು ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಶಾಲನಗರ ಕೂಡ್ಲೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಕಾಫಿ ವರ್ಕ್ಸ್ ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 7 ಸಾವಿರ ಕೆ.ಜಿ. ಕಾಫಿ ಕಳ್ಳತನವಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್, ಕುಶಾಲನಗರ ವೃತ್ತದ ಸಿಪಿಐ ದಿನೇಶ್ ಕುಮಾರ್, ಗ್ರಮಾಂತರ ಪಿಎಸ್‌ಐ ರಾಮಚಂದ್ರ, ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡ ತನಿಖೆ ಕೈಗೊಂಡು ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಬಿ.ಪಿ. ಶಾಘಿಸಿದ್ದಾರೆ.










