
ಬೆಂಗಳೂರು NEWS DESK ಸೆ.11 : ಮಡಿಕೇರಿ ದಸರಾ ಜನೋತ್ಸವಕ್ಕೆ 1.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಮಡಿಕೇರಿ ದಸರಾ ಸಮಿತಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅದ್ದೂರಿ ದಸರಾ ಆಚರಣೆಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈಗಾಗಲೇ 1.50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದರು. ನಿಯೋಗದ ನೇತೃತ್ವ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಕಳೆದ ವರ್ಷದಂತೆ ಈ ಬಾರಿಯೂ 1.50 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ದೊರೆತ್ತಿದೆ. ಹೆಚ್ಚಿನ ಅನುದಾನದ ನಿರೀಕ್ಷೆ ಇತ್ತಾದರೂ ಕಳೆದ ವರ್ಷದ ಮೊತ್ತವನ್ನೇ ನೀಡಲು ಸರಕಾರ ನಿರ್ಧರಿಸಿ ಆಗಿತ್ತು ಎಂದರು. ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತ, ಉಪಾಧ್ಯಕ್ಷ ಡಿಶು, ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಸಹ ಕಾರ್ಯದರ್ಶಿ ಮುದ್ದುರಾಜು, ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್, ವೇದಿಕೆ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆರ್.ಪಿ ಮತ್ತಿತರರು ನಿಯೋಗದಲ್ಲಿದ್ದರು.









