
ಮಡಿಕೇರಿ NEWS DESK ಅ.3 : ದಶಮಂಟಪಗಳ ಆಕರ್ಷಕ ಶೋಭಾಯಾತ್ರೆಯೊಂದಿಗೆ ಮಡಿಕೇರಿ ದಸರಾ ಜನೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಸಾವಿರಾರು ಮಂದಿ ವಿದ್ಯುತ್ ಅಲಂಕೃತ ಬೃಹತ್ ಮಂಟಪಗಳ ಶೋಭಾಯಾತ್ರೆಗೆ ಸಾಕ್ಷಿಯಾದರು. ಆದರೆ ಡಿಜೆ ಶಬ್ಧಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದ್ದ ಕಾರಣ ನೆರೆದಿದ್ದ ಯುವ ಸಮೂಹ ನಿರಾಶೆ ವ್ಯಕ್ತಪಡಿಸಿತು. ಕಳೆದ 150 ವರ್ಷಗಳಿಂದ ನಾಡಹಬ್ಬ ಮಡಿಕೇರಿ ದಸರಾಕ್ಕೆ ಧಾರ್ಮಿಕ ಹಾಗೂ ಸಾಂಪ್ರದಾಯಿಕವಾಗಿ ಮೆರಗನ್ನು ನೀಡುತ್ತಿರುವ ಪೇಟೆ ಶ್ರೀರಾಮ ಮಂದಿರದ ಶ್ರೀ ಕೃಷ್ಣನಿಂದ ಗೀತೋಪದೇಶವಾಗುವ ಕಥಾ ಸಾರಾಂಶದ ಮಂಟಪ ನಗರ ಸಂಚಾರವನ್ನು ಆರಂಭಿಸಿದ ನಂತರ ಉಳಿದ ಮಂಟಪಗಳ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 50ನೇ ವರ್ಷದ ಉತ್ಸವ ಆಚರಣೆಯ ಹಿನ್ನೆಲೆ ವಿಷ್ಣು ಪುರಾಣದಿಂದ ಆಯ್ದ ದೇವ-ದೇವತೆಗಳ ಕಾಳಗ, ಶರಬಾವತಾರ ಹಾಗೂ ಪ್ರತ್ಯುಂಗ ದೇವಿಯಿಂದ ನರಸಿಂಹನ ಉಗ್ರ ಶಮನದ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿತ್ತು. ನಗರದ ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ತನ್ನ 63ನೇ ವರ್ಷದ ದಸರಾ ಉತ್ಸವದ ಮಂಟಪದಲ್ಲಿ ಆನಂದ ರಾಮಾಯಣದಿಂದ ಆರಿಸಿದ ಮಹಾ ಸಾದ್ವಿ ಸೀತೆಯ ಚಂಡಿಕಾವತಾರ ಎಂಬ ಕಥಾ ಸಾರಾಂಶವನ್ನು ಪ್ರದರ್ಶಿಸಿತು. ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 107ನೇ ವರ್ಷದ ದಸರಾ ಉತ್ಸವ ಆಚರಣೆಯ ಮಂಟಪದಲ್ಲಿ ಶ್ರೀರಾಮಾಂಜನೇಯ ವೈಭವ ಕಥಾ ಸಾರಾಂಶ ಪ್ರದರ್ಶನಗೊಂಡಿತು. ನಗರದ ನಾಲ್ಕು ಶಕ್ತಿ ದೇವತೆಗಳ ಪೈಕಿ ಹಿರಿಯ ಅಕ್ಕಳೆಂದೆ ಖ್ಯಾತಿಯಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 52 ನೇ ವರ್ಷದ ಮಂಟಪದಲ್ಲಿ ಶಿವ ಪುರಾಣದ 11 ರಿಂದ 16 ಅಧ್ಯಾಯದ ಪರಶಿವನಿಂದ ಜಲಾಂಧರನ ವಧೆ ಎಂಬ ಕಥಾ ಸಾರಾಂಶವನ್ನು ಪ್ರದರ್ಶಿಸಿತು. ಶ್ರೀಕೋಟೆ ಮಹಾಗಣಪತಿ ದೇವಾಲಯ 49ನೇ ವರ್ಷದ ದಸರಾ ಉತ್ಸವದ ಮಂಟಪದಲ್ಲಿ ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ ಕಥಾ ಸಾರಾಂಶ ಪ್ರದರ್ಶನಗೊಂಡಿತು.
ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 30ನೇ ವರ್ಷದ ಮಂಟಪದಲ್ಲಿ ಸಂಜೀವಿನಿ ಸಸ್ಯಕ್ಕಾಗಿ ದ್ರೋಣಗಿರಿಯನ್ನು ಹೊತ್ತು ತರುವ ಆಂಜನೇಯನ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿತು. ನಾಲ್ಕು ಶಕ್ತಿ ದೇವತೆಗಳಲ್ಲೊಂದಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ 62ನೇ ವರ್ಷದ ಮಂಟಪದಲ್ಲಿ ಪರಶುರಾಮನಿಂದ ಕಾರ್ತಿಕೆ ವೀರನ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿತು. 95ನೇ ವರ್ಷದ ದಸರಾ ಉತ್ಸವದ ಸಂಭ್ರಮದಲ್ಲಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ದಸರಾ ಮಂಟಪ ಸಮಿತಿಯಿಂದ ‘ಶಿವ ಪುರಾಣದಿಂದ ಆಯ್ದ ಪರಶಿವನಿಂದ ಅಂಧಕಾಸುರನ ವಧೆ’ ಕಥಾ ಸಾರಾಂಶ ಪ್ರದರ್ಶನಗೊಂಡಿತು. ಶ್ರೀಕೋದಂಡ ರಾಮ ದೇವಾಲಯದ ದಸರಾ ಮಂಟಪ ಸಮಿತಿಯು 51 ನೇ ವರ್ಷದ ಮಂಟಪದಲ್ಲಿ ‘ಶ್ರೀ ಕ್ಷೇತ್ರ ಅದಿಚುಂಚನಗಿರಿ ಕಾಲ ಭೈರವ ಮಹಾತ್ಮೆ’ ಎಂಬ ಕಥಾವಸ್ತುವನ್ನು ಪ್ರದರ್ಶಿಸಿತು. *ಶ್ರೀಕೋಟೆ ಮಹಾಗಣಪತಿ ಮತ್ತು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಪ್ರಥಮ* ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ ಕಥಾ ಸಾರಾಂಶವನ್ನು ಹೊಂದಿದ್ದ ಶ್ರೀಕೋಟೆ ಮಹಾಗಣಪತಿ ದೇವಾಲಯ ಮತ್ತು ದೇವ-ದೇವತೆಗಳ ಕಾಳಗ, ಶರಬಾವತಾರ ಹಾಗೂ ಪ್ರತ್ಯುಂಗ ದೇವಿಯಿಂದ ನರಸಿಂಹನ ಉಗ್ರ ಶಮನದ ಕಥೆಯನ್ನು ಹೊಂದಿದ್ದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಅಂಕಗಳ ಆಧಾರದಲ್ಲಿ ಸಮಬಲ ಗಳಿಸಿ ಪ್ರಥಮ ಬಹುಮಾನ ಪಡೆದುಕೊಂಡವು. ಪರಶುರಾಮನಿಂದ ಕಾರ್ತಿಕೆ ವೀರನ ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಿದ ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ದ್ವಿತೀಯ ಹಾಗೂ ‘ಶಿವ ಪುರಾಣದಿಂದ ಆಯ್ದ ಪರಶಿವನಿಂದ ಅಂಧಕಾಸುರನ ವಧೆ’ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ತೃತೀಯ ಬಹುಮಾನ ಗಳಿಸಿತು.
*ಯುವ ಸಮೂಹಕ್ಕೆ ನಿರಾಶೆ* ದಶಮಂಟಪಗಳ ಶೋಭಾಯಾತ್ರೆಯೇ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣಯಾಗಿದೆ. ಈ ಶೋಭಾಯಾತ್ರೆಯೊಂದಿಗೆ ಸಾಗುವ ಡಿಜೆ ಅಬ್ಬರಕ್ಕೆ ಕುಣಿದು ಸಂಭ್ರಮಿಸಲು ಅತ್ಯಧಿಕ ಸಂಖ್ಯೆಯಲ್ಲಿ ಯುವಕ, ಯುತಿಯರು ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಮಡಿಕೇರಿ ದಸರಾಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿ ನ್ಯಾಯಾಲಯದ ಆದೇಶದ ಕಾರಣ ನೀಡಿ ಪೊಲೀಸ್ ಇಲಾಖೆ ಡಿಜೆ ಶಬ್ಧಕ್ಕೆ ಕಡಿವಾಣ ಹಾಕಿತ್ತು. ಕಥಾ ಸಾರಾಂಶ ಪ್ರದರ್ಶನದ ವೇಳೆ ಮಾತ್ರ ಧ್ವನಿವರ್ಧಕಗಳನ್ನು ಬಳಸಿದ ಮಂಟಪಗಳು ನಂತರ ಮೌನವಾಗಿಯೇ ಸಾಗಿದವು. ಇದರಿಂದ ಯುವ ಸಮೂಹ ಭಾರೀ ನಿರಾಶೆಯನ್ನು ಅನುಭವಿಸಿತು. *ಬನ್ನಿ ಮಂಟಪಕ್ಕೆ ತೆರಳಿದ ಕರಗಗಳು* ಮಡಿಕೇರಿ ದಸರಾ ಕರಗೋತ್ಸವ ಮತ್ತು ಕರಗಗಳ ನಗರ ಸಂಚಾರ ತನ್ನದೇ ಆದ ಇತಿಹಾಸ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಬನ್ನಿ ಮಂಟಪದಲ್ಲಿ ಕರಗೋತ್ಸವದ ಮೂಲಕವೇ ನವರಾತ್ರಿ ಆರಂಭಗೊಂಡು ವಿಜಯದಶಮಿಯ ನಂತರದ ದಿನ ನಸುಕಿನಲ್ಲಿ ಬನ್ನಿ ಮಂಟಪದಲ್ಲಿ ಕರಗಗಳು ಬಂದು ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಸಂಪನ್ನಗೊಳ್ಳುತ್ತದೆ. ಈ ಸಂಪ್ರದಾಯದಂತೆ ಶುಕ್ರವಾರ ನಸುಕಿನಲ್ಲಿ ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳು ದಶಮಂಟಪಗಳಿಂದ ಪೂಜೆ ಪಡೆದು ಬನ್ನಿ ಮಂಟಪಕ್ಕೆ ತೆರಳಿದವು. ಅಲ್ಲಿ ಬನ್ನಿ ಕಡಿಯುವ ಮೂಲಕ ದಸರಾ ಹಾಗೂ ಕರಗೋತ್ಸವಕ್ಕೆ ತೆರೆ ಎಳೆಯಲಾಯಿತು.











