
ಮಡಿಕೇರಿ NEWS DESK ಅ.7 : ಸುಪ್ರೀಂಕೋರ್ಟ್ ಆವರಣದಲ್ಲೇ ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ವಿರುದ್ಧ ಪಾದರಕ್ಷೆ ಎಸೆಯಲು ಪ್ರಯತ್ನಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ತಿಳಿಸಿದೆ. ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಅವರು ಮನುವಾದಿ ಮತ್ತು ಪ್ರಜ್ಞಾಹೀನ ಮನೋಸ್ಥಿತಿಯ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಸಾಮಾಜಿಕ ಪ್ರತಿರೋಧ ಎದುರಿಸಿ ಸತತ ಪರಿಶ್ರಮ, ಅರ್ಹತೆ ಮತ್ತು ಸಾಧನೆಯ ಮೂಲಕ ಸಂವಿಧಾನಬದ್ಧವಾದ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇದನ್ನು ಸಹಿಸದ ವ್ಯಕ್ತಿ ಪಾದರಕ್ಷೆ ಎಸೆಯುವ ಪ್ರಯತ್ನ ಮಾಡಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಅಸಹನೆ ಭದ್ರವಾಗಿ ಉಳಿದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಾಂತರ ಜಾತ್ಯಾತೀತ ಮನಸ್ಸುಗಳು ಇಂದು ಗವಾಯಿ ಅವರ ಪರವಾಗಿ ನಿಂತು ಕೃತ್ಯ ನಡೆಸಿದ ವ್ಯಕ್ತಿಯನ್ನು ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕೃತ್ಯ ಕೇವಲ ಕೆಳವರ್ಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಅಥವಾ ನ್ಯಾಯಮೂರ್ತಿಗಳ ಮೇಲೆ ನಡೆದ ದಾಳಿಯ ಯತ್ನವಲ್ಲ. ಇದು ಭಾರತೀಯ ಸಂವಿಧಾನಕ್ಕೆ ಮಾಡಿದ ಬಹುದೊಡ್ಡ ಅಪಮಾನವಾಗಿದ್ದು, ಇಂತಹ ಮನುವಾದಿ ಮನಸ್ಸುಗಳುಳ್ಳ ವ್ಯಕ್ತಿಗಳನ್ನು ಈ ದೇಶದ ಕಾನೂನು ಸಹಿಸುವುದಿಲ್ಲ. ಇದೊಂದು ಸಾಮಾನ್ಯ ಪ್ರಕರಣ ಎಂದು ಹೇಳಿಕೆ ನೀಡುತ್ತಿರುವ ಮನುವಾದಿ ರಾಜಕಾರಣಿಗಳು ಈ ದೇಶದ ಕೋಮುವಾದಿಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ. ಸಂವಿಧಾನವನ್ನು ಗೌರವಿಸದೆ ವಿರೋಧಿಸುವ ವ್ಯಕ್ತಿಗೆ ಈ ದೇಶದಲ್ಲಿ ಇರುವ ಹಕ್ಕು ಸಹ ಇರುವುದಿಲ್ಲ. ಆದ್ದರಿಂದ ಇಂತಹ ವ್ಯಕ್ತಿಗಳನ್ನು ತಕ್ಷಣ ಗಡಿಪಾರು ಮಾಡಬೇಕೆಂದು ರಾಷ್ಟçಪತಿಗಳಲ್ಲಿ ಮನವಿ ಮಾಡುವುದಾಗಿ ಜೆ.ಎಲ್.ಜನಾರ್ಧನ್ ಹಾಗೂ ಎಂ.ಎಸ್.ವೀರೇಂದ್ರ ತಿಳಿಸಿದ್ದಾರೆ.








