
ಮಡಿಕೇರಿ ಅ.9 NEWS DESK : ಮಡಿಕೇರಿ ದಸರಾ ಕ್ರೀಡಾ ಸಮಿತಿಯಿಂದ ಅ.12ರಂದು ನಗರದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಪಂದ್ಯಾವಳಿಯ ಆಹ್ವಾನ ಪತ್ರಿಕೆ ಮತ್ತು ಆಕರ್ಷಕ ಟ್ರೋಫಿಗಳನ್ನು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅನಾವರಣಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಕೆರ, ದಸರಾ ಉತ್ಸವದ ಸಂದರ್ಭ ನಡೆಯಬೇಕಿದ್ದ ಕಬಡ್ಡಿ ಪಂದ್ಯಾವಳಿಯನ್ನು ಮಳೆಯ ಕಾರಣಗಳ ಹಿನ್ನೆಲೆ ಇದೀಗ ನಡೆಸಲಾಗುತ್ತಿದೆ. ಪಂದ್ಯಾವಳಿ ಮುಕ್ತವಾಗಿದ್ದು, ಸುಮಾರು ಇಪ್ಪತ್ತು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಕ್ ಔಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆಯೆಂದು ತಿಳಿಸಿದರು. ಪುರುಷರ ವಿಭಾಗದ ಕಬಡ್ಡಿ ಪಂದ್ಯಾವಳಿಗೆ ಪ್ರವೇಶ ಶುಲ್ಕವಾಗಿ ಪ್ರತಿ ತಂಡಕ್ಕೆ 10 ಸಾವಿರ ರೂ.ಗಳನ್ನು , ಮಹಿಳಾ ವಿಭಾಗಕ್ಕೆ 2 ಸಾವಿರ ರೂ.ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿ ನಡೆಯುವ ದಿನದವರೆಗೆ ತಂಡಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಂದ್ಯಾವಳಿ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, ಅಂತಿಮ ಪಂದ್ಯವು ಅಂದು ರಾತ್ರಿಯೆ ಹೊನಲು ಬೆಳಕಿನಡಿ ನಡೆಯಲಿದೆಯೆಂದು ಸ್ಪಷ್ಟಪಡಿಸಿದರು. :: ವಿಜೇತರಿಗೆ ಲಕ್ಷ ಬಹುಮಾನ ಆಕರ್ಷಕ ಟ್ರೋಫಿ :: ಕಬಡ್ಡಿ ಪಂದ್ಯಾವಳಿ ವಿಜೇತ ತಂಡಕ್ಕೆ 1 ಲಕ್ಷದ 1 ರೂ, ದ್ವಿತೀಯ 50 ಸಾವಿರದ 1 ರೂ., ತೃತೀಯ 25 ಸಾವಿರದ 1 ರೂ. ಹಾಗೂ ಮಹಿಳಾ ಮಹಿಳಾ ವಿಭಾಗದಲ್ಲಿ ಪ್ರಥಮ 15 ಸಾವಿರದ 1 ರೂ, ದ್ವಿತೀಯ 10 ಸಾವಿರದ 1 ರೂ.ವಿನೊಂದಿಗೆ ಅತ್ಯಾಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದೆಂದು ಮಾಹಿತಿಯನ್ನಿತ್ತರು. :: ಟ್ರೋಫಿ-ಆಹ್ವಾನ ಪತ್ರಿಕೆ ಬಿಡುಗಡೆ :: ಪಂದ್ಯಾವಳಿಯ ವಿಜೇತರಿಗೆ ನೀಡುವ ಅತ್ಯಾಕರ್ಷಕವಾದ ಟ್ರೋಫಿಗಳನ್ನು ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಮತ್ತು ಪದಾಧಿಕಾರಿಗಳು ಅನಾವರಣಗೊಳಿಸಿದ್ದಲ್ಲದೆ, ಪಂದ್ಯಾವಳಿಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು. :: ಉದ್ಘಾಟನೆ :: ನಗರದ ಗಾಂಧಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯಾವಳಿಯನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ವಹಿಸಲಿದ್ದಾರೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಡಿಕೇರಿ ದಸರಾ ಸಮಿತಿ ಹಾಗೂ ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಶಕ್ತಿ ದಿನಪತ್ರಿಕೆ ಸಂಪಾದಕ ಜಿ.ಚಿದ್ವಿಲಾಸ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ.ಅನಿಲ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು. ಗೌರವ ಉಪಸ್ಥಿತಿಯಲ್ಲಿ ನಗರಸಭೆ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರ ದಸರಾ ಸಮಿತಿ ಖಜಾಂಚಿ ಸಬಿತಾ, ನಗರಸಭೆ ಪೌರಾಯುಕ್ತ ರಮೇಶ್, ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಗೂ ವಿಶೇಷ ಆಹ್ವಾನಿತರಾಗಿ ಮಡಿಕೇರಿ ನಗರಸಭೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಲಿದ್ದಾರೆ. ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಕೆ.ಆರ್.ದಿನೇಶ್, ಸಹ ಕಾರ್ಯದರ್ಶಿ ನಿರಂಜನ್, ಗೌರವಾಧ್ಯಕ್ಷ ಕೆ.ಆರ್.ರವಿ, ಕ್ರೀಡಾ ಸಂಚಾಲಕ ಕಾವೇರಿಮನೆ ಭರತ್, ಸದಸ್ಯ ಉಮೇಶ್ ಕುಮಾರ್ ಉಪಸ್ಥಿತರಿದ್ದರು.









