
ಮಡಿಕೇರಿ NEWS DESK ಅ.9 : ಹರ್ ಮಂದಿರ್ ಆಶ್ರಮ ವಸತಿ ಶಾಲೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 2ನೇ ತರಗತಿಯ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗಾ.ಪಂ ವ್ಯಾಪ್ತಿಯ ಹೆರವನಾಡು ಗ್ರಾಮದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಉಳಿದ 52 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾಗಮಂಡಲ ಹೋಬಳಿ ಚೆಟ್ಟಿಮಾನಿ ಗ್ರಾಮದ ಕೃಷಿಕ ಕೇಕಡ ಅನಿಲ್ ಕುಮಾರ್ ಹಾಗೂ ಕುಂದಚೇರಿ ಸರಕಾರಿ ಶಾಲೆಯ ಅತಿಥಿ ಶಿಕ್ಷಕಿ ತ್ರಿವೇಣಿ ದಂಪತಿಯ ಪುತ್ರ ಪುಷ್ಪಕ್ (7) ಅಗ್ನಿ ದುರಂತಕ್ಕೆ ಬಲಿಯಾದ ಬಾಲಕನಾಗಿದ್ದಾನೆ. ದೆಹಲಿಯ ಎನ್‌ಜಿಓ ಸಂಸ್ಥೆ ಕಾಟಕೇರಿ ಗ್ರಾಮದಲ್ಲಿ ನಡೆಸುತ್ತಿರುವ ಹರ್ ಮಂದಿರ್ ಆಶ್ರಮ ವಸತಿ ಶಾಲೆಯ ವಸತಿ ನಿಲಯದಲ್ಲಿ ಗುರುವಾರ ನಸುಕಿನ 4 ಗಂಟೆಯ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ದೆಯಲ್ಲಿದ್ದ ಒಟ್ಟು 53 ವಿದ್ಯಾರ್ಥಿಗಳಲ್ಲಿ 52 ಮಂದಿ ಹೇಗೋ ಹೊರಗೆ ಓಡಿ ಬಂದಿದ್ದಾರೆ. ಆದರೆ ಪುಷ್ಪಕ್ ಹೊರ ಬರಲಾಗದೆ ಬೆಂಕಿಯಲ್ಲಿ ಸಿಲುಕಿ ಅಸುನೀಗಿದ್ದಾನೆ.
ಬೆಂಕಿ ಅವಘಡದಲ್ಲಿ ವಿದ್ಯಾರ್ಥಿಗಳಾದ ಸಿದ್ದಾಪುರದ ತನ್ವಿತ್ ಹಾಗೂ ಹಾಸನದ ಭುವನ್, ಸಿಬ್ಬಂದಿಗಳಾದ ಸುಮಿತ್ರ ಹಾಗೂ ಮೋನಿಕಾ ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. *ಬಡ ವಿದ್ಯಾರ್ಥಿಗಳ ಶಾಲೆ* ಹರ್ ಮಂದಿರ್ ವಸತಿ ಶಾಲೆ 2019ರಲ್ಲಿ ಆರಂಭಗೊಂಡಿದ್ದು, 1ರಿಂದ 7ನೇ ತರಗತಿಯವರೆಗೆ ಬಡ ವಿದ್ಯಾರ್ಥಿಗಳಿಗೆ ಕುಠೀರ ಮಾದರಿಯ ಕೊಠಡಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಒಟ್ಟು 102 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 72 ಮಕ್ಕಳು ವಸತಿ ನಿಲಯದಲ್ಲಿ ವಾಸವಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ಊರಿಗೆ ಹೋಗಿದ್ದ ಕೆಲವು ವಿದ್ಯಾರ್ಥಿಗಳು ಮರಳಿ ಶಾಲೆಗೆ ಬಂದಿರಲಿಲ್ಲ. ಮೃತ ಪುಷ್ಪಕ್ ಹಾಗೂ ಆಕೆಯ ಅಕ್ಕ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಚನ(10) ಸೇರಿದಂತೆ 53 ವಿದ್ಯಾರ್ಥಿಗಳು ವಸತಿ ಶಾಲೆಗೆ ಮರಳಿದ್ದರು. ಬುಧವಾರ ರಾತ್ರಿ 30 ಬಾಲಕರು ಹಾಗೂ 23 ಬಾಲಕಿಯರು ಮಲಗಿದ್ದರು. ಶಾಲಾ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳು ಕೂಡ ಇದೇ ವಠಾರದಲ್ಲಿ ವಾಸವಾಗಿದ್ದರು. ಗುರುವಾರ ನಸುಕಿನಲ್ಲಿ ವಸತಿ ನಿಲಯದ ಮೇಲ್ಛಾವಣಿಗೆ ಬೆಂಕಿ ತಗುಲಿ ಸಂಪೂರ್ಣ ಕಟ್ಟಡ ಹೊತ್ತಿ ಉರಿದಿದೆ. ಈ ಸಂದರ್ಭ ಎಚ್ಚರಗೊಂಡ ಕಾಲೂರು ಮೂಲದ ವಿದ್ಯಾರ್ಥಿ ಬಬಿನ್ ಬಿದ್ದಪ್ಪ ಎಂಬಾತ ಕೂಗಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮಕ್ಕಳ ಕೂಗಾಟ ಕೇಳಿ ಎಚ್ಚರಗೊಂಡ ಶಾಲಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಆಗಮಿಸಿ ವಿದ್ಯಾರ್ಥಿಗಳನ್ನು ವಸತಿ ನಿಲಯದಿಂದ ಹೊರಗೆ ಕರೆ ತಂದಿದ್ದಾರೆ. ಆ ಹೊತ್ತಿಗಾಗಲೇ ಬೆಂಕಿ ವಸತಿ ನಿಲಯದ ಎಲ್ಲಾ ಕೊಠಡಿಗಳನ್ನು ವ್ಯಾಪಿಸಿದೆ. ಹೊರಗೆ ಬಂದ ವಿದ್ಯಾರ್ಥಿಗಳ ಸಂಖ್ಯೆಯನ್ನು ಎಣಿಸಿದ ಸಂದರ್ಭ ಓರ್ವ ವಿದ್ಯಾರ್ಥಿ ಇಲ್ಲದಿರುವುದು ಕಂಡು ಬಂದಿದೆ. ತೀವ್ರ ಬೆಂಕಿ ಹರಡಿದ್ದರಿಂದ ಶಾಲಾ ಸಿಬ್ಬಂದಿ ಸಹಿತ ಗ್ರಾಮಸ್ಥರು ಕೂಡ ಕೊಠಡಿಗೆ ನುಗ್ಗಲಾಗದೆ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆ. ಆದರೆ ಆ ಹೊತ್ತಿಗಾಗಲೇ ದಟ್ಟ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ ವಿದ್ಯಾರ್ಥಿ ಪುಷ್ಪಕ್ ಹೊರ ಬರಲಾರದೆ ಸ್ಥಳದಲ್ಲಿಯೇ ಸಜೀವ ದಹನವಾಗಿದ್ದಾನೆ. ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಪುಷ್ಪಕ್ ನ ಮೃತದೇಹ ಬಹುತೇಕ ಸುಟ್ಟು ಹೋದ ಸ್ಥಿತಿಯಲ್ಲಿ ವಸತಿ ನಿಲಯದ ಕೊಠಡಿಯಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್, ಮಡಿಕೇರಿ ತಹಶೀಲ್ದಾರ್ ಶ್ರೀಧರ್, ಡಿಡಿಪಿಐ ಗಂಗಾಧರಪ್ಪ, ಅಗ್ನಿಶಾಮಕ ದಳದ ಅಧಿಕಾರಿ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ, ಚೆಸ್ಕಾಂ ಹಿರಿಯ ಅಧಿಕಾರಿಗಳು, ಗ್ರಾಮಾಂತರ ಠಾಣಾ ಪೊಲೀಸ್, ವಿಧಿ ವಿಜ್ಞಾನ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. *ತನಿಖೆಗೆ ಕ್ರಮ* ಘಟನೆ ನಡೆದ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮೃತ ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದರು. ಅವಘಡದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಘಟನೆ ಕುರಿತು ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತದೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರವಾಗಿ ಸರಕಾರದ ಗಮನ ಸೆಳೆಯಲಾಗುತ್ತದೆ. ನೊಂದ ಕುಟುಂಬದ ಜೊತೆ ಜಿಲ್ಲಾಡಳಿತ ಇರಲಿದೆ ಎಂದು ಭರವಸೆ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಅವರು ಮಾತನಾಡಿ ಶಾಲಾ ಸಿಬ್ಬಂದಿಗಳು 52 ಮಕ್ಕಳನ್ನು ರಕ್ಷಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲನೆ ಮಾಡಲಾಗಿದ್ದು, ಪೊಲೀಸ್ ಇಲಾಖೆಯಿಂದಲೂ ತನಿಖೆ ನಡೆಯಲಿದೆ ಎಂದರು.









