
ಮಡಿಕೇರಿ NEWS DESK ಅ.10 : ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ಪ್ರಕರಣ ಖಂಡನೀಯ. ಇದು ಸಂವಿಧಾನದ ಮೇಲಿನ ದಾಳಿಯಾಗಿದ್ದು, ಈ ರೀತಿಯ ಘಟನೆಗಳು ನ್ಯಾಯಾಂಗದ ಘನತೆಗೆ ದಕ್ಕೆ ತರುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಕೀಲ ರಾಕೇಶ್ ಕಿಶೋರ್ ಮಾಡಿರುವ ತಪ್ಪನ್ನು ಸ್ವತ: ವಕೀಲನಾಗಿರುವ ನಾನು ತೀವ್ರವಾಗಿ ಖಂಡಿಸುತ್ತೇನೆ, ಇದು ಕ್ಷಮಿಸಲಾಗದ ಕೃತ್ಯವಾಗಿದೆ ಎಂದು ತಿಳಿಸಿದ್ದಾರೆ. ಇದು ನಮ್ಮ ದೇಶದ ಪವಿತ್ರ ಸಂವಿಧಾನದ ಮೇಲಿನ ದಾಳಿಯಾಗಿದ್ದು, ಈ ರೀತಿಯ ಬೆಳವಣಿಗೆ ಕಾನೂನು ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಶಾಂತಿಯುತ ಹೋರಾಟಗಳು ನ್ಯಾಯಾಂಗ ವ್ಯವಸ್ಥೆ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂವಿಧಾನದ ಆಶಯಗಳಿಗೆ ಬದ್ಧರಾಗಿರುವ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಬೆಂಬಲಕ್ಕೆ ಸಿಎನ್‌ಸಿ ನಿಲ್ಲಲಿದೆ. ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ಸಂಸ್ಥೆಗಳಲ್ಲಿ ಅಪಾರ ಗೌರವ ಹೊಂದಿದಾಗ ಮಾತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿ ಹಾಗೂ ಶಾಶ್ವತವಾಗಿ ಮುಂದುವರಿಯಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಘಟನೆಯನ್ನು ನಿರ್ಲಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಗವಾಯಿ ಅವರ ಘನತೆ ಮತ್ತು ಶಾಂತ ಪ್ರತಿಕ್ರಿಯೆ ಉನ್ನತ ಮಟ್ಟದ ಪ್ರಬುದ್ಧತೆಯನ್ನು ಸೂಚಿಸುತ್ತದೆ. ಅಲ್ಲದೆ ಕಾನೂನಿನ ನಿಯಮದೊಂದಿಗೆ ಅವರಿಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಗವಾಯಿ ಅವರ ಈ ಗುಣವನ್ನು ಶ್ಲಾಘಿಸುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕು ಸೇರಿದಂತೆ ಕೊಡವರ ಹಕ್ಕುಗಳಿಗಾಗಿ ಸಿಎನ್‌ಸಿ ಸಂಘಟನೆ ಕಳೆದ 35 ವರ್ಷಗಳಿಂದ ಶಾಂತಿಯುತ ಹೋರಾಟ ನಡೆಸಿಕೊಂಡು ಬಂದಿದೆ. ಮುಂದಿನ ಹೋರಾಟಗಳನ್ನು ಕೂಡ ಸಂವಿಧಾನದ ಚೌಕಟ್ಟಿನಡಿ ಶಾಂತಿಯುತವಾಗಿಯೇ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.








