
ಮಡಿಕೇರಿ ಅ.10 NEWS DESK : ಸರ್ಕಾರದ ಪೋಷಣ್ ಕಾರ್ಯಕ್ರಮದ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹುದಿಕೇರಿ ಕೊಡವ ಸಮಾಜದಲ್ಲಿ ತಾಲ್ಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಕಲಿಯುವ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲೆಂದು ಸರಕಾರವು ಮಕ್ಕಳಿಗೆ ವಿವಿಧ ಸೌಲತ್ತುಗಳನ್ನು ಕಲ್ಪಿಸಲು ಬದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅವರಿಗೆ ಬೇಕಾದಂತಹ ಎಲ್ಲಾ ಪೌಷ್ಟಿಕಾಂಶ ಇರುವ ಆಹಾರಗಳನ್ನು ಸರಕಾರ ಕೊಡುಗೆಯಾಗಿ ನೀಡುತ್ತಿದೆ. ಈ ಕಾರ್ಯಕ್ರಮಗಳು ಎಲ್ಲರಿಗೂ ತಲುಪುವಂತಾಗಬೇಕು. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ಪೌಷ್ಟಿಕಾಂಶದ ಕೊರತೆಗಳಿಂದ ಬಳಲುತ್ತಿರುವುದು ವರದಿಗಳಿಂದ ಮನಗಂಡ ಸರಕಾರವು ಇಂತಹ ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಶಾಸಕರು ಕರೆ ನೀಡಿದರು. ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಸೀಮಂತ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಪಂಚಾಯಿತಿ ಅಧ್ಯಕ್ಷರು ಕಾವೇರಮ್ಮ, ಸದಸ್ಯರಾದ ರೇವತಿ, ಮನೋಹರ್ ಸೋಮಯ್ಯ, ಶಿಲ್ಪಾ, ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.









