
ಮಡಿಕೇರಿ NEWS DESK ಅ.10 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಗ್ರಂಥಾಲಯದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಿತು. ಕಾಲೇಜ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ವಿದ್ಯಾರ್ಥಿಗಳಿಗೆ ಓದು ಮತ್ತು ಸಾಕ್ಷರತೆಯ ಮಹತ್ವದ ಕುರಿತು ವಿವರಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪಂಜಾಬ್ ಅಮೃತಸರ್ ಗುರುನಾನಕ್‌ದೇವ್ ವಿಶ್ವವಿದ್ಯಾಲಯದ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಪ್ರೊ.ಎಂ.ಪಿ.ಸತೀಜ ಹಾಗೂ ಬೆಂಗಳೂರು ಇಂಡಿಯನ್ ಸ್ಟೇಟಿಸ್ಟಿಕಲ್ ಇನ್ಸ್ಸ್ಟಿಟ್ಯೂಟ್ (ಐ.ಎಸ್.ಐ) ಡಾಕ್ಯುಮೆಂಟೇಶನ್ ಮತ್ತು ರಿಸರ್ಚ್ ಟ್ರೈನಿಂಗ್ ಸೆಂಟರ್ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಮಾತನಾಡಿ ಸಾಕ್ಷರತೆ, ಓದು, ಸಂಶೋಧನಾ ಪ್ರಬಂಧ, ಬರವಣಿಗೆಯ ಮಹತ್ವ, ಬರವಣಿಗೆಯಲ್ಲಿ ಪಾಲಿಸಬೇಕಾದ ನೀತಿ ನಿಯಮಗಳ ಬಗ್ಗೆ ತಾಂತ್ರಿಕ ಉಪನ್ಯಾಸ ನೀಡಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅವರು ಕಾಲೇಜ್ ನ ಗ್ರಂಥಾಲಯದ ಡಿಜಿಟಲೀಕರಣ, ಇ-ಬುಕ್ ವ್ಯವಸ್ಥೆ, ಇ.ಲರ್ನಿಂಗ್, ವಿದ್ಯಾರ್ಥಿಗಳಿಗೆ ದೈನಂದಿನ ಬಳಕೆಗೆ ಸುಲಭವಾದ ವ್ಯವಸ್ಥೆಗಳು ಹಾಗೂ ಓದಿನ ಮಹತ್ವದ ಬಗ್ಗೆ ತಿಳಿಸಿದರು. ರಾಜ್ಯದ ವಿವಿಧ ಭಾಗಗಳ ಗ್ರಂಥಪಾಲಕರು, ಸ್ಥಳೀಯ ಗ್ರಂಥಪಾಲಕರು, ಉಪನ್ಯಾಸಕರು ಸೇರಿದಂತೆ ಒಟ್ಟು 62 ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಫೀ.ಮಾ.ಕಾರ್ಯಪ್ಪ ಕಾಲೇಜ್ ನ ಬೋಧಕ, ಭೋದಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದ ಆಯೋಜಕರು ಹಾಗೂ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಗ್ರಂಥಪಾಲಕಿ ಡಾ.ಸಿ.ವಿಜಯಲತ ಸ್ವಾಗತಿಸಿ, ವಾಣಿಜ್ಯ ಶಾಸ್ತç ವಿಭಾಗದ ಡಾ.ಶೈಲಶ್ರೀ ನಿರೂಪಿಸಿ, ಸಮಾಜಶಾಸ್ತ್ರ ವಿಭಾಗದ ಡಾ.ಎ.ಎನ್.ಗಾಯತ್ರಿ ವಂದಿಸಿದರು. ವಿದ್ಯಾರ್ಥಿಗಳಾದ ಸ್ವಪ್ನ ಹಾಗೂ ಚೊಂದಮ್ಮ ಪ್ರಾರ್ಥಿಸಿದರು. ಕೊನೆಯಲ್ಲಿ ಗುಂಪು ಚರ್ಚೆ ನಡೆಸಿ, ಪ್ರಮಾಣಪತ್ರ ವಿತರಿಸಲಾಯಿತು.









