
ವಿರಾಜಪೇಟೆ ಅ.11 NEWS DESK : ವಿರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜು, ಕನ್ನಡ ಭಾಷಾ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ “ಪರಿಸರದಸ್ಮಿತೆ ಪೂಚಂತೇ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ವಿರಾಜಪೇಟೆ ಸ.ಪ್ರ.ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜು ಕೆ. ಸಂಪ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕೃಷಿ ಹಾಗೂ ಸಾಹಿತ್ಯದಲ್ಲಿ ಪರಿಸರ ಹಾಗೂ ಜೀವಸಂಕುಲದ ಅನಾವರಣವಾಗಿರುವ ಬಗ್ಗೆ ಉದಾಹರಣೆಗಳ ಮೂಲಕ ವಿವರಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಪ್ರತೀ ಬರಹಗಳು ಪ್ರಕೃತಿಯೊಂದಿಗೆ ಅನನ್ಯತೆ ಹೊಂದಿದೆ. ಪರಿಸರ ಜೀವಸಂಕುಲದ ಬಗ್ಗೆ ತೇಜಸ್ವಿಯವರು ಬರೆದಷ್ಟು ಬಹುಶಃ ಯಾವ ಬರಹಗಾರರೂ ಬರೆದಿರಲಾರರು ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಬಿಸಿಎ ವಿದ್ಯಾರ್ಥಿಗಳಾದ ಮಹಮ್ಮದ್ ಸಫ್ವಾನ್, ಆಶಿಕ್, ಮುಸ್ತಾಕ್ ಹಾಗೂ ಶಿಬಿಲ್ ವಿನ್ಯಾಸಗೊಳಿಸಿದ ಕಾಲೇಜಿನ ಕನ್ನಡ ಭಾಷಾ ಮುಖ್ಯಸ್ಥರಾದ ಅರ್ಜುನ್ ಮೌರ್ಯ ಅವರ ವೆಬ್ಸೈಟ್ ಅನ್ನು ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಯೋಜಕಿಯಾದ ಬಿ.ಡಿ.ಹೇಮ, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಅರ್ಜುನ್ ಮೌರ್ಯ, ಸಹ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ, ಕಾಲೇಜಿನ ಬೋಧಕ ವರ್ಗ, ಕನ್ನಡ ವಿದ್ಯಾರ್ಥಿ ಬಳಗದ ಪದಾಧಿಕಾರಿಗಳು ಹಾಗೂ ತರಗತಿ ಪ್ರತಿನಿಧಿ ವಿದ್ಯಾರ್ಥಿಗಳು ಹಾಜರಿದ್ದರು.









