
ಮಡಿಕೇರಿ ಅ.13 NEWS DESK : ಕಳೆದ ಹಲವಾರು ವರ್ಷಗಳಿಂದ ಪ್ರತಿಭಾವಂತ ಬಡ ವಿದ್ಯಾರ್ಥಿನಿಯರಿಗೆ ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ದತ್ತಿ ನಿಧಿ ಹಾಗೂ ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ವಿತರಿಸಿದರು. ಪ್ರಸಕ್ತ ಸಾಲಿನಲ್ಲಿ ನೂರಾರು ಅರ್ಜಿಗಳು ಬಂದಿದ್ದು, ಉನ್ನತ ಮಟ್ಟದ ಆಯ್ಕೆ ಸಮಿತಿಯಿಂದ ಪುರಸ್ಕೃತಗೊಂಡ ಅರ್ಹ ವಿದ್ಯಾರ್ಥಿನಿಯರಿಗೆ ವಿರಾಜಪೇಟೆಯ ಶಾಸಕರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿನಿಯರಿಗೆ ಮುಂದಿನ 3 ವರ್ಷದ ವಿದ್ಯಾಭ್ಯಾಸಕ್ಕೆ ತಲಾ 10,000 ದಂತೆ, ಪ್ರತಿ ವರ್ಷ ಆರ್ಥಿಕ ನೆರವು ಪಡೆಯಲಿದ್ದಾರೆ ಎಂದು ತಿಳಿಸಿದರು. ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂಬ ಕಾರಣದಿಂದ, ತಂದೆ ತಾಯಿಯ ಹೆಸರಿನಲ್ಲಿ ಶೈಕ್ಷಣಿಕ ಕಳಕಳಿಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾಗಿ ತಿಳಿಸಿದರು. ಈಗಾಗಲೇ ನೂರಾರು ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದು, ಈ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುದಲ್ಲದೆ, ಮುಂದಿನ ಪೀಳಿಗೆಯ ಮಕ್ಕಳಿಗೆ ನೀವುಗಳು ಸಹ ಮಾದರಿಯಾಗಬೇಕೆಂದು ಕರೆ ನೀಡಿದರು. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಸದಾ ಓದಿನಲ್ಲಿ ಮುಂದಿರುತ್ತಾರೆ. ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಡಕಾಗಬಾರದು ಹಾಗೂ ಅವರ ಸಾಮಥ್ರ್ಯ ಮಂಕಾಗಬಾರದು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಾದುದ್ದೇಶ ಸಂಪನ್ನ ಆಗಬೇಕೆಂದರೆ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಬೇಕೆಂದು ಇಂಗಿತ ವ್ಯಕ್ತಪಡಿಸಿದರು. ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಮಾತನಾಡಿ, ರಾಜಕೀಯ ರಹಿತವಾಗಿ ಶಾಸಕರು ಮಾಡುತ್ತಿರುವ ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೆಚ್ಚಿ ಅವರೊಂದಿಗೆ ತಾನು ಸದಾ ಇರುವುದಾಗಿ ತಿಳಿಸಿದರು. ಯೋಜನೆಯ ಪ್ರಯೋಜನ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುವ ಮೂಲಕ ಸಹಾಯ ಮಾಡಿದ ಎಲ್ಲರನ್ನೂ ಕೃತಜ್ಞತಾಪೂರಕವಾಗಿ ನೆನಸಿಕೊಳ್ಳಬೇಕು ಹಾಗೂ ಧನಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಅರಮೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಮಾತನಾಡಿ, ಶಾಸಕ ಪೊನ್ನಣ್ಣ ಅವರ ಕಾರ್ಯವೈಖರಿಯನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿದ್ದು, ಅವರ ನಿಸ್ವಾರ್ಥ ಸೇವೆ ಹಾಗೂ ಸಾಮಾಜಿಕ-ಶೈಕ್ಷಣಿಕ ಕಳಕಳಿಯು ದೇಶಕ್ಕೇ ಮಾದರಿ ಎಂದು ಬಣ್ಣಿಸಿದರು. ಅವರಿಗೆ ಮತ್ತಷ್ಟು ಉನ್ನತ ಹುದ್ದೆ ದೊರಕಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು. ಪ್ರಮುಖರಾದ ಮಾಚಿಮಂಡ ಗಂಗಾ ಸುಬ್ರಮಣಿ, ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಆರತಿ ಸೋಮಯ್ಯ, ಮಕ್ಕಳ ಪೋಷಕರು, ವಿರಾಜಪೇಟೆ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಹಾಗೂ ಪದಾಧಿಕಾರಿಗಳು, ಸರ್ಕಾರಿ ನಾಮನಿರ್ದೇಶತ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಸಂಸ್ಥೆಯ ಆಡಳಿತ ಟ್ರಸ್ಟಿ ಹಾಗೂ ಶಾಸಕರ ಹಿರಿಯ ಸಹೋದರ ನರೇನ್ ಕಾರ್ಯಪ್ಪ ಸ್ವಾಗತಿಸಿದರು. ಮಂಜುನಾಥ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.









