


ಮಡಿಕೇರಿ ಅ.16 NEWS DESK : ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಅ.20 ರಂದು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನಿಡಿದ ಅವರು, ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಾರಿಕೆ ಪಿ.ದಿನೇಶ್ ಕುಮಾರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ವಹಿಸಿಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತರಾದ ನಂಗಾರು ಆರ್.ನಾಣಯ್ಯ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ವಿದ್ಯಾನಿಧಿ ದಾನಿಗಳಾದ ಕಾಫಿ ಬೆಳೆಗಾರ ತಳೂರು ಯಶೋಧ ಸೋಮಣ್ಣ, ಭಾಗಮಂಡಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆನೇರ ಜಾನಕಿ ಮೋಹನ್, ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚೆರಿಯಮನೆ ಬಿ.ರಾಮಚಂದ್ರ, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಿಡ್ಯಮಲೆ ದೇವಕಿ ಅನುರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕೊಡಗು ಗೌಡ ವಿದ್ಯಾ ಸಂಘದಿಂದ ಹಲವು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ, ಸಿಇಟಿ, ನೀಟ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸೂದನ ಜಿ. ಧನ್ಯಶ್ರೀ, ಐ.ಡಿ.ಧೃತಿ ಮತ್ತು ಪಿ.ಡಿ. ದೀಪ್ತಿ ಸೇರಿದಂತೆ ಮೂವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ವಿವರಿಸಿದರು. :: ಮಾರ್ಚ್‍ನಲ್ಲಿ ನೂತನ ಕಟ್ಟಡ ಉದ್ಘಾಟನೆ : : ವಿದ್ಯಾ ಸಂಘದ ಉಪಾಧ್ಯಕ್ಷ ಅಮೆ ಸಿ.ಸೀತಾರಾಮ್ ಮಾತನಾಡಿ, ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ 1908 ರಲ್ಲಿ ರಚನೆಗೊಂಡ ಕೊಡಗು ಗೌಡ ವಿದ್ಯಾ ಸಂಘ ಇದೀಗ 117ನೇ ವರ್ಷದ ಸಂಭ್ರಮದಲ್ಲಿದ್ದು, ವಿದ್ಯಾ ಸಂಘದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡುತ್ತಿದ್ದು, 2026ರ ಮಾರ್ಚ್ ಒಳಗಾಗಿ ನೂತನ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಈ ಕಟ್ಟಡದಲ್ಲಿ ಗೌಡ ಜನಾಂಗ ಮಾತ್ರವಲ್ಲದೇ ಎಲ್ಲಾ ಸಮುದಾಯ ಬಾಂಧವರು ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ನಿರ್ದೇಶಕ ಚೊಕ್ಕಾಡಿ ಎನ್.ಅಪ್ಪಯ್ಯ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತಷ್ಟು ಸಾಧಿಸಲಿ ಎಂದು ಪ್ರತಿ ವರ್ಷ ವಿದ್ಯಾ ಸಂಘ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದು, ಇದರಿಂದ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಆದ್ದರಿಂದ ಸೋಮವಾರ ನಡೆಯುವ ಸಮಾರಂಭದಲ್ಲಿ ಅರೆಭಾಷೆ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಮತ್ತೋರ್ವ ನಿರ್ದೇಶಕರಾದ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಪಡೆದ ಹಲವರು ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಾನಿಗಳು ಸಹಕಾರ ನೀಡಿದರೆ ನಿUಧಿಯಂತೆ ಕಟ್ಟಡದ ಯೋಜನೆ ಪೂರ್ಣಗೊಳ್ಳಲಿದೆ. ಆದ್ದರಿಂದ ದಾನಿಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್, ನಿರ್ದೇಶಕರಾದ ಕುಂಭಗೌಡನ ಡಿ.ವಿನೋದ್ ಕುಮಾರ್ ಉಪಸ್ಥಿತರಿದ್ದರು.









