
ಮಡಿಕೇರಿ ಅ.20 NEWS DESK : ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ತಾಲ್ಲೂಕು ಮಹಿಳಾ ಬಂಟರ ಸಂಘ, ನಗರ ಬಂಟರ ಸಂಘ, ವಿರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು ಬಂಟರ ಸಂಘದ ಸಹಯೋಗದಲ್ಲಿ ಮಡಿಕೇರಿ ತಾಲ್ಲೂಕು ಬಂಟರ ಸಂಘದ ಆಶ್ರಯದಲ್ಲಿ ಅ.26 ರಂದು ನಗರದ ಗಾಂಧಿ ಮೈದಾನದಲ್ಲಿ ‘ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರ ನೀಡಿದ ಮಡಿಕೇರಿ ತಾಲ್ಲೂಕು ಬಂಟರ ಸಂಘದ ಖಜಾಂಚಿ ದಿನೇಶ್ ರೈ, 2023-24, 2024-25ನೇ ಸಾಲಿಗೆ ಸಂಬಂಧಿಸಿದಂತೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ 30 ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೂರ್ನಾಡು, ಕಗ್ಗೋಡ್ಲು, ತಾಳತ್‌ಮನೆ, ನಾಪೋಕ್ಲು, ಕತ್ತಲೆಕಾಡು, ಗಾಳಿಬೀಡು ಬಂಟರ ಸಂಘದ ಹೋಬಳಿ ಘಟಕಗಳ ಅಧ್ಯಕ್ಷರನ್ನು ಹಾಗೂ ಪ್ರತಿ ಹೋಬಳಿಯಲ್ಲಿರುವ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಇದರೊಂದಿಗೆ ಸ್ವಜಾತಿ ಬಂಧಿಗಳ ಸಾಧಕರಿಗೆ, ಚುನಾಯಿತ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುತ್ತದೆ ಎಂದರು. ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅ.26 ರಂದು ಬೆಳಗ್ಗೆ 9.30 ಗಂಟೆಗೆ ಗಾಂಧಿ ಮೈದಾನದ ವೇದಿಕೆಯಲ್ಲಿ ಚಲನಚಿತ್ರ ನಟರಾದ ಸುರೇಶ್ ರೈ ಮತ್ತು ಭವ್ಯ ಶ್ರೀ ರೈ ಅವರು ಉದ್ಘಾಟಿಸಲಿದ್ದಾರೆ. ಮಡಿಕೇರಿ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಆರ್.ಸದಾಶಿವ ರೈ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭ ಅಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷರಾದ ಸದಾಶಿವ ರೈ, ಗೌರವ ಸಲಹೆಗಾರರಾದ ಹರೀಶ್ ರೈ, ಮಡಿಕೇರಿ ತಾಲ್ಲೂಕು ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಲೋಕೇಶ್ ಹಾಗೂ ಸದಸ್ಯ ಸಾವಿತ್ರಿ ಉದಯ ಶೆಟ್ಟಿ ಉಪಸ್ಥಿತರಿದ್ದರು.









