
ಮಡಿಕೇರಿ ಡಿ.22 NEWS DESK : ಮೈಸೂರಿನ ಹೂಟುಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಂತೋಷ ಕೂಟ ಸಂಘದ ಅಧ್ಯಕ್ಷ ಪೊನ್ನಚ್ಚನ ಪಿ.ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜೇಶ್ ತೇನನ ಹಾಗೂ ದೇವಜನ ಗೀತಾ ಮೊಂಟಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಕುಯ್ಯಮುಡಿ ಗೀತಾ, ಸಂಘದ ಹಿರಿಯರಾದ ದಾಯನ ಬಾಲಕೃಷ್ಣ ಹಾಗೂ ನಾಟೋಳನ ಭವಾನಿ ಮಾಚಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಪ್ರಗತಿಯ ಕುರಿತು ಮುಖ್ಯ ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು. ಮಧ್ಯಾಹ್ನ ಸಂತೋಷ ಕೂಟದ ಪ್ರಯುಕ್ತ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಸಂಘದ ಉಪಾಧ್ಯಕ್ಷ ಚೆರುಕನ ಲವ, ಕಾರ್ಯದರ್ಶಿ ಮುಕ್ಕಾಟಿ ಅರುಣ, ಸಹ ಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಜಾಂಚಿ ಎಡಿಕೇರಿ ಪೂಣಚ್ಚ, ಸಲಹಾ ಸೂಚಕರಾದ ನಡುಮನೆ ಚಂಗಪ್ಪ ಹಾಗೂ ಚೆಟ್ಟಿಮಾಡ ಜನಾರ್ಧನ ಉಪಸ್ಥಿತರಿದ್ದರು.









