
ಮಡಿಕೇರಿ ಡಿ.24 NEWS DESK : ಮೈಸೂರಿನ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿನಿ ಕೊಡಗಿನ ಬಿ.ದಿಯಾ ಭೀಮಯ್ಯಗೆ ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ ಲಭಿಸಿದೆ. ಅಕಾಡೆಮಿಯು ಘೋಷಿಸಿದ ಆಯ್ಕೆ ಪಟ್ಟಿಯಂತೆ 202223 ನೇ ಸಾಲಿನ ಜೂನಿಯರ್ ವಿಭಾಗದ ಕ್ರೀಡಾ ಕ್ಷೇತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಕುಂದಾನಗರಿ ಬೆಳಗಾವಿಯ ಸುವರ್ಣ ಸೌಧದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಜಕ್ಸ್ತಾನ್ ನಲ್ಲಿ ನಡೆಯುತ್ತಿರುವ ಅಸ್ತಾನ ಇಂಟರ್ನ್ಯಾಷನಲ್ ಚಾಲೆಂಜ್ 2025 ಟೂರ್ನಿಯಲ್ಲಿ ಭಾಗವಹಿಸಲು ತೆರಳಿರುವ ದಿಯಾ ಭೀಮಯ್ಯ ಪರವಾಗಿ ಪ್ರಶಸ್ತಿಯನ್ನು ಅವರ ತಾಯಿ ಕುಸುಮ ಅವರು ಸ್ವೀಕರಿಸಿದರು. ಕರ್ನಾಟಕ ಅಗ್ರ ಶ್ರೇಯಾಂಕದ ಆಟಗಾರ್ತಿಯಾದ ಬಿ.ದಿಯಾ ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿಯನ್ನು ಮೇದುರ ಅರುಣ್ ಪೆಮ್ಮಯ್ಯ ಅವರಿಂದ ಪಡೆದಿದ್ದು, ಪ್ರಸ್ತುತ ಅಸ್ಸಾಮಿನ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಅಧೀನದ ಸೆಂಟರ್ ಆಫ್ ಎಕ್ಸೆಲೆನ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ದಿಯಾ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ದಂಪತಿಯ ಪುತ್ರಿ. ಬಾಲ ಗೌರವ ಪ್ರಶಸ್ತಿ ಸಂಗೀತ, ನೃತ್ಯ, ಕ್ರೀಡೆ, ಚಿತ್ರಕಲೆ, ವಿಜ್ಞಾನ ಕ್ಷೇತ್ರದ ಬಹುಮುಖ ಪ್ರತಿಭೆಯಲ್ಲಿ ಉತ್ತಮ ಸಾಧನೆ ತೋರಿದ 18 ವರ್ಷದೊಳಗಿನ ಮಕ್ಕಳಿಗೆ ಕೊಡಲ್ಪಡುವ ಕರ್ನಾಟಕ ಸರ್ಕಾರದ ಉನ್ನತ ಪ್ರಶಸ್ತಿಯಾಗಿದೆ.








