
ಮಡಿಕೇರಿ ಜ.19 NEWS DESK : ಕೊಡಗಿನ ಗಡಿಭಾಗ ಸಂರಕ್ಷಿತ ಅರಣ್ಯ ಮಾಕುಟ್ಟ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಯರವ ಜನಾಂಗಕ್ಕೆ ಸೇರಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಆಧಾರ್ ಕಾರ್ಡ್ ವಿತರಿಸಿದರು. ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಯಾವುದೂ ಇವರಿಗೆ ಇರದ ಪರಿಣಾಮ ಸರ್ಕಾರ ನೀಡುವ ಯಾವುದೇ ಸೌಲಭ್ಯ ಇವರಿಗೆ ಲಭಿಸುತ್ತಿರಲಿಲ್ಲ. ಈ ವಿಚಾರ ಶಾಸಕ ಪೊನ್ನಣ್ಣ ನವರ ಗಮನಕ್ಕೆ ಬಂದಾಗ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆ ನೀಡಿ ಮೊದಲ ಹಂತದಲ್ಲಿ ಆಧಾರ್ ಕಾರ್ಡ್ ಮಾಡಿಸುವಲ್ಲಿ ಸಫಲರಾಗಿದ್ದು, ಮುಂದಿನ ತಿಂಗಳ ಒಳಗಾಗಿ ಪಡಿತರ ಚೀಟಿ ವಿತರಿಸಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನಾಗಿ ಅವರನ್ನು ನೋಂದಾಯಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಇಲ್ಲಿ ಹದಿನೇಳು ಕುಟುಂಬಗಳು ವಾಸವಾಗಿದ್ದು, ಕೂಡಲೇ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿ ಅನುಪಾಲನಾ ವರದಿ ಒಪ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕಾಲೋನಿ ನಿವಾಸಿಗಳಿಗೆ ಯಾವುದೇ ಸಮಸ್ಯೆ ಬರದ ಹಾಗೆ ವಿಶೇಷ ಜಾಗೃತಿ ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಮುಖರಾದ ಪಟ್ಟಡ ರಂಜಿ ಪೂಣಚ್ಚ, ಪಂಚಾಯತ್ ಸಂಘಟನೆಯ ತೆನ್ನಿರ ಮೈನಾ, ಹನೀಫ್ ಚೋಕಂಡ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ಆರ್.ಕೆ.ಸಲಾಂ. ವರ್ಗೀಸ್, ಪಟ್ಟಡ ರಕ್ಷಿತ್, ಗ್ರಾಮ ಪಂಚಾಯತ್ ಸದಸ್ಯ ಅಮ್ಮಣ ಕುಟ್ಟಂಡ ಕಟ್ಟಿ, ಕೋಳುಮಂಡ ರಫೀಕ್, ಶಬೀರ್, ಜೋಕಿಮ್, ಬೋಪಣ್ಣ, ಮಂಜುನಾಥ್ , ಚುಬ್ಬಾ, ಸಫ್ವಾನ್, ಫಕ್ರು, ಕಂದಾಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.









