
ಸುಂಟಿಕೊಪ್ಪ 22 NEWS DESK : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮದ್ಯಪಾನ ಮುಕ್ತ ಸಮಾಜದಿಂದ ಮಾತ್ರ ರಾಮರಾಜ್ಯ ಸ್ಥಾಪನೆ ಎಂಬುದನ್ನು ಪ್ರತಿಪಾದಿಸಿದ್ದು, ಅವರ ತತ್ವ ಆದರ್ಶಗಳನ್ನು ಪಾಲಿಸುವಂತೆ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು. ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ರಾಯಿಲ ಉಜಿರೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಮತ್ತು ಪಗ್ರತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಂಟಿಕೊಪ್ಪ ವಲಯದ ಎಲ್ಲಾ ಅಂಗ ಸಂಸ್ಥೆಗಳು ಆರಕ್ಷಕಠಾಣೆ ಪ್ರಾಥಮಿಕ ಆರೋಗ್ಯ ಕೆಂದ್ರ ನವಜೀವನ ಸಮಿತಿ, ಶೌರ್ಯ ವಿಪತ್ತು ನಿರ್ವಹಣ ಘಟಕ ಮಡಿಕೇರಿ ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ 2040ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ನೇರವೇರಿಸಿ ಅವರು ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ಛಾಪನ್ನು ಮೂಡಿಸಿದ್ದು, ಮನೆ ಮನೆಗಳಲ್ಲಿ ಶಾಂತಿ ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ಮದ್ಯಪಾನ ಮುಕ್ತರಾಗಿಸುವ ತಪ್ಪಸ್ಸನ್ನು ಕೈಗೊಂಡಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಾವು ಕಾಣಬಹುದಾಗಿದೆ ಎಂದು ಅವರು ಹೇಳಿದರು. ಸಮಾಜದ ದೊಡ್ಡ ಪಿಡುಗು ಆಗಿರುವ ಮದ್ಯಪಾನ ಮತ್ತು ಅಮಲು ಪದಾರ್ಥಗಳ ಸೇವನೆಯನ್ನು ನಿಲ್ಲಿಸುವುದು ನಾವೆಲ್ಲಾರೂ ಮಾಡಬೇಕಾದ ಪುಣ್ಯದ ಕೆಲಸವೆಂದು ಅವರು ಹೇಳಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಮದ್ಯವರ್ಜನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾಗೂ ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, 10 ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ಮದ್ಯವರ್ಜನ ಶಿಬಿರ ನಡೆದಾಗ ತಾನೋಬ್ಬ ಸ್ವಯಂ ಸೇವಕನಾಗಿದ್ದೆ, ಇಂದು ಸಮಿತಿಯ ಅಧ್ಯಕ್ಷನಾಗಿ ಸುಂಟಿಕೊಪ್ಪ ಪ್ರಥಮ ಪ್ರಜೆಯಾಗಿ 8 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ತಮ್ಮ ಶಕ್ತಿ ಮೀರಿ ಸೇವೆ ಸಲ್ಲಿಸುವುದಾಗಿ ಘೋಷಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ವಿಶ್ವ ಹಿಂದೂ ಪರಿಷತ್‍ನ ಮಾಜಿ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಜನರಿಂದ ಜನರಿಗಾಗಿ ಜನರಿಗೋಸ್ಕರ ತಮ್ಮ ಕ್ಷೇತ್ರದಲ್ಲಿ ಬಂದ ಕಾಣಿಕೆ ಹಣವನ್ನು ಮರಳಿ ಜನರಿಗೆ ನೀಡಿದ ಅಪರೂಪದಲ್ಲಿ ಅಪರೂಪದ ಶ್ರೀಕ್ಷೇತ್ರ ಧರ್ಮಸ್ಥಳ ಎಂದು ಬಣ್ಣಿಸಿದರು. ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಜೀವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪರಿಮಿತ ಎಂದು ಅವರು ಉಲ್ಲೇಖಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಕೆಲವು ಕಾರ್ಯಕ್ರಮಗಳು ಹಣ ಮಾಡುವ ಉದ್ದೇಶವನ್ನು ಹೊಂದಿದೆ ಭಾವನೆಯನ್ನು ಕೆಲವರು ಹೊಂದಿದ್ದಾರೆ. ಆದರೆ ಮದ್ಯವರ್ಜನ ಶಿಬಿರವು ಸೇರಿದಂತೆ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಜನೋಪಯೋಗಿ ಮತ್ತು ಸಮಾಜಮುಖಿಯಾಗಿವೆ ಎಂದು ಅವರು ಹೇಳಿದರು. ಮದ್ಯಪಾನ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಬಸಪ್ಪ, ಮದ್ಯವರ್ಜನ ಶಿಬಿರದ ಗೌರವಧ್ಯಕ್ಷ ವಿ.ಎ.ಸಂತೋಷ್, ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಎಸ್.ಬಿ.ಶಂಕರ್, ತಾಲೂಕು ಯೋಜನಾಧಿಕಾರಿ ಎನ್.ಪುರೋಷತ್ತಮ್, ಶಿಬಿರದ ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 2039 ಮದ್ಯವರ್ಜನ ಶಿಬಿರಗಳಿಂದ ಸರಿಸುಮಾರು ಒಂದುವರೆ ಲಕ್ಷ ವ್ಯಸನಿಗಳು ವ್ಯಸನದಿಂದ ಮುಕ್ತರಾಗಿದ್ದಾರೆ ಎಂದು ಹೇಳಿದರು. ಋತುಶ್ರೀ ಪ್ರಾರ್ಥಿಸಿದರು. ಮಹೇಂದ್ರ ಸ್ವಾಗತಿಸಿದರು. ಸಂತೋಷ್ ನಿರೂಪಿಸಿ, ವಂದಿಸಿದರು.









