
ಮಡಿಕೇರಿ ಜ.22 NEWS DESK : ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ, ಕೋಟ್ಯಂತರ ಹಿಂದೂ ಬಾಂಧವರ ನಿರೀಕ್ಷೆಯಂತೆ ‘ಶ್ರೀ ರಾಮ ಲಲ್ಲಾ’ನ ಪ್ರತಿಷ್ಠಾಪನೆಯೊಂದಿಗೆ, ಭವ್ಯ ಮಂದಿರ ಲೋಕಾರ್ಪಣೆಗೊಂಡ ಪುಣ್ಯದಿನದ ಅಂಗವಾಗಿ ನಗರದ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಶ್ರೀರಾಮ ಲಲ್ಲಾನ ಮೂರ್ತಿಯೊಂದಿಗೆ ಮಂದಿರ ಅಯೋಧ್ಯೆಯಲ್ಲಿ ಭಕ್ತರಿಗೆ ತೆರೆದುಕೊಂಡಲ್ಲಿಂದ ನಗರದ ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿ ವರ್ಷಂಪ್ರತಿ ಅನ್ನದಾನದ ಸಂಕಲ್ಪದೊಂದಿಗೆ, ಅದನ್ನು ನಡೆಸಿಕೊಂಡು ಬರುತ್ತಿದೆ. ವರ್ಷಂಪ್ರತಿಯಂತೆ ಈ ಬಾರಿಯೂ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಹಸ್ರಾರು ಮಂದಿಗೆ ಅನ್ನ ಪ್ರಸಾದ ವಿತರಣೆÉ ಅತ್ಯಂತ ಶಿಸ್ತುಬದ್ಧವಾಗಿ, ಭಕ್ತಿಪೂರ್ವಕವಾಗಿ ನೆರವೇರಿತು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದ, ಅನ್ನ ಪ್ರಸಾದ ವಿತರಣಾ ಜಾಗದಲ್ಲಿ ಗಣಪತಿ ಹೋಮವನ್ನು ನಡೆಸಿ, ನಗರದ ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಬೆ.11 ಗಂಟೆಯಿಂದ ಆರಂಭಗೊಂಡ ಅನ್ನ ಪ್ರಸಾದ ವಿತರಣಾ ಕಾರ್ಯ ಸಂಜೆಯವರೆಗೆ ನಡೆಯಿತು. ಈ ಅವಧಿಯಲ್ಲಿ 5 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದ್ದು ವಿಶೇಷ. :: ಗಮನ ಸೆಳೆದ ಅಚ್ಚುಕಟ್ಟುತನ :: ಖಾಸಗಿ ಬಸ್ ನಿಲ್ದಾಣದಲ್ಲಿ ಅನ್ನ ಪ್ರಸಾದ ವಿತರಣೆಗೆ ನಾಲ್ಕು ಕೌಂಟರ್‍ಗಳನ್ನು ನಿರ್ಮಿಸಿ, ಭಕ್ತಾದಿಗಳಿಗೆ ದಿನದ ವಿಶೇಷವಾಗಿ ಅನ್ನ-ಸಾಂಬಾರು ಮತ್ತು ಪಾಯಸವನ್ನು ವಿತರಿಸಲಾಯಿತು. ಈ ಕಾರ್ಯದಲ್ಲಿ ಸಮಿತಿಯ ಪದಾಧಿಕಾರಿಗಳೊಂದಿಗೆ ನಗರದ ವಿವಿಧ ಸಂಘ ಸಂಸ್ಥೆಯ ನೂರಾರು ಸ್ವಯಂ ಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂದರ್ಭ ಅನ್ನ ಪ್ರಸಾದ ವಿತರಣೆಯ ಪ್ರದೇಶದ ಪರಿಸರದ ಸ್ವಚ್ಛತೆಗೆ ಹೆಚ್ಚಿನ ನಿಗಾವಹಿಸಿದ್ದು ಅಪರೂಪದ್ದು. :: 10 ಕ್ವಿಂಟಾಲ್ ಅಕ್ಕಿ ಬಳಕೆ :: ಅನ್ನ ಪ್ರಸಾದ ವಿತರಣೆಗೆ ಸಮಿತಿಯು ದಾನಿಗಳು, ಭಕ್ತರ ಸಹಕಾರದೊಂದಿಗೆ ಸುಮಾರು 10 ಕ್ಷಿಂಟಾಲ್ ಅಕ್ಕಿಯ ಅನ್ನವನ್ನು ಸಿದ್ಧಪಡಿಸಿದ್ದರೆ, ಭಕ್ತ ಸಮೂಹ, ದಾನಿಗಳು ನೀಡಿದ್ದ ತರಕಾರಿಗಳ್ನು ಬಳಸಿ ಸಾಂಬಾರನ್ನು ಸಿದ್ಧಪಡಿಸಿ, ಭಕ್ತರಿಗೆ ಉಣಬಡಿಸಿದ್ದು ಗಮನ ಸೆಳೆಯುವಂತದ್ದು. ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಪಿ.ಡಿ.ನವೀನ್, ರಘು, ಸದಾಶಿವ ರೈ, ಪ್ರಭು ರೈ, ಆನಂದ, ಶೇಖರ್, ಪ್ರಸಾದ್ ಸಂಪಿಗೆ ಕಟ್ಟೆ ಅವರ ಹಲ ದಿನಗಳ ಪರಿಶ್ರಮ ‘ಅನ್ನ ಪ್ರಸಾದ’ ವಿತರಣೆಯ ಪುಣ್ಯ ಕಾರ್ಯವನ್ನು ಯಶಸ್ವಿಗೊಳಿಸಿತು.










