
ಸೋಮವಾರಪೇಟೆ ಫೆ.18 NEWS DESK : ನೇರುಗಳಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿತ್ಲುಮಕ್ಕಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಮುಚ್ಚಿರುವ ಕಲ್ಲುಕೋರೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋರೆಯ ಅಕ್ಕಪಕ್ಕದಲ್ಲೇ ಅನೇಕ ಮನೆಗಳು ಇರುವುದಲ್ಲದೆ, ಪುಟ್ಟ ಮಕ್ಕಳು ಪ್ರತಿದಿನ ಅದೇ ರಸ್ತೆಯ ಮೂಲಕ ಶಾಲೆಗೆ ಸಂಚರಿಸುತ್ತಿದ್ದಾರೆ. ಕೆಲ ವಯೋವೃದ್ಧರು ಒಬ್ಬರೇ ವಾಸವಾಗಿದ್ದು, ಕಲ್ಲು ಕೋರೆಯ ಪುನರಾರಂಭದಿಂದ ಅವರ ಸುರಕ್ಷತೆ ಅಪಾಯಕ್ಕೆ ಒಳಗಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸಮೀಪದಲ್ಲೇ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ನಡೆಯುತ್ತಿದ್ದ ಕಲ್ಲುಕೋರೆ ಬ್ಲಾಸ್ಟ್‍ನಲ್ಲಿ ಶಾಲಾ ಕಟ್ಟಡಗಳಲ್ಲೇ ಬಿರುಕುಗಳು ಕಂಡುಬಂದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಲ್ಲುಕೋರೆ ಪ್ರಾರಂಭವಾದರೆ, ಭಾರೀ ವಾಹನಗಳ ಸಂಚಾರದಿಂದ ರಸ್ತೆ ಪರಿಸ್ಥಿತಿಯೂ ಹದಗೆಡಲಿದೆ. ಅನೇಕ ಕಡೆ ಗುಂಡಿಗಳು ಉಂಟಾಗಿ ಮಳೆಗಾಲದಲ್ಲಿ ಕೆಸರಿನ ಹೊಂಡಗಳಾಗಿ ಮಾರ್ಪಡುತ್ತವೆ. ಧೂಳು ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗಿ ಮಕ್ಕಳು, ವೃದ್ಧರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರಾದ ರಾಮಚಂದ್ರ, ಶಿವಣ್ಣ, ಮಹಮ್ಮದ್, ಅಪ್ಪಯ್ಯ, ಪದ್ಮಾವತಿ, ಮಮತಾ, ಶಾರದಾ, ಶಾಹೀನ, ಸ್ವಾತಿ, ಶ್ರುತಿ, ರಶ್ಮಿತಾ, ನಿಶಾ, ಲಲಿತಾ ಸೇರಿದಂತೆ ಹಲವರು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪರವಾನಿಗೆ ನೀಡಿದಲ್ಲಿ ಗ್ರಾಮಸ್ಥರು ಒಗ್ಗೂಡಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.









