
ಮಡಿಕೇರಿ ಫೆ.18 NEWS DESK : ಎಲ್ಲ ಊರಿನ ದೇವರ ಕಾಡುಗಳು ಊರಿನ ಎಲ್ಲ ಸಮುದಾಯಗಳ ಸಾಮರಸ್ಯ ಕಾಪಾಡುವ ವ್ಯವಸ್ಥೆಯಾಗಿದೆ. ದೇವರ ಕಾಡುಗಳನ್ನು ಕಾಪಾಡುವುದು, ದೇವರ ಉತ್ಸವಗಳನ್ನು ನಡೆಸುವುದು ಊರಿನವರ ಜವಾಬ್ದಾರಿಯಾಗಿ ನಡೆದುಕೊಂಡು ಬಂದಿರುವ ಕಾರಣ ದೇವರ ಕಾಡು ಉಳಿದಿದೆ ಎಂದು ಕೊಡಗು ಮಾಡಲು ಫಾರೆಸ್ಟ್ ಅಧ್ಯಕ್ಷ ಪ್ರೊ. ಸಿ.ಜಿ.ಕುಶಾಲಪ್ಪ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಸುಲೋಚನಾ ಡಾ. ಎಂ.ಜಿ ನಾಗರಾಜ್ ದತ್ತಿ ಆಶಯದಂತೆ ಕೊಡಗಿನ ದೇವರ ಕಾಡುಗಳ ಸಂರಕ್ಷಣೆ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು. ಕೊಡಗಿನಲ್ಲಿ 1,215 ದೇವರ ಕಾಡುಗಳಿವೆ ಅವುಗಳಲ್ಲಿ 165ಕ್ಕೂ ಹೆಚ್ಚು ಬೇರೆ ಬೇರೆ ದೇವರುಗಳಿವೆ. ಇವು ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಕೊಡಗಿನ ಎಲ್ಲ ಸಮುದಾಯಗಳ ದೇವರು ಕಾಡುಗಳಿದ್ದು ವಿಶೇಷವಾಗಿ ಕೊಡವ ಮಾಪಿಳ್ಳೆ ದೇವರ ಕಾಡುಗಳು ಇದ್ದು ಪಳ್ಳಿಕಾಡು ಎನ್ನುವ ಹೆಸರಿಂದ ಗುರುತಿಸಲ್ಪಡುತ್ತಿದೆ. ದೇವರ ಕಾಡುಗಳಲ್ಲಿರುವ ಅಯ್ಯಪ್ಪ ಭದ್ರಕಾಳಿ ಮುಂತಾದ ದೇವರುಗಳಿಗೆ ಗುಡಿಗಳಿಲ್ಲ ಅದು ಆಕಾಶಕ್ಕೆ ಮುಖ ಮಾಡಿಕೊಂಡು ಮಳೆ ಕರೆಯುತ್ತಿವೆ ಇವುಗಳ ಜೊತೆಯಲ್ಲಿ ಬೇಟೆ ನಾಯಿಗಳು ಇವೆ ಎಂದರು. ದೇವರ ಕಾಡುಗಳು ಧಾರ್ಮಿಕ ಸಂಪ್ರದಾಯ, ಸಂಸ್ಕೃತಿ ಉಳಿಸುವ ಜೊತೆಗೆ ಊರಿನ ನ್ಯಾಯ ಪಂಚಾಯಿತಿಯನ್ನು ಮಾಡುವ ತಾಣಗಳಾಗಿವೆ. ಅದೊಂದು ದೈವೀಕ ನೆಲೆಯಾಗಿದೆ ಈ ಕಾರಣದಿಂದಲೇ ಇಡೀ ದೇಶದಲ್ಲಿಯೇ ಒಂದು ವಿಶಿಷ್ಟ ಮಾದರಿಯಾಗಿ ಕೊಡಗಿನ ದೇವರ ಕಾಡುಗಳು ಗುರುತಿಸಲ್ಪಡುತ್ತವೆ ಎಂದರು. ವಿಶ್ವದಲ್ಲಿಯೇ ಅಪರೂಪ ಎನ್ನುವ ರೀತಿಯಲ್ಲಿ ದೇವರ ಹೆಸರಿನಲ್ಲಿ ಉಳಿದಿರುವ ಈ ಕಾಡುಗಳ ಬಗ್ಗೆ ಸಂಶೋಧನೆ ಮಾಡಲು ಎಂಟು ವಿವಿಧ ರಾಷ್ಟ್ರಗಳ ಸಂಶೋಧಕರು ಬಂದು ನಾಲ್ಕು ವರ್ಷಗಳ ಕಾಲ ಇಲ್ಲಿಯೇ ಇದ್ದು ಸಂಶೋಧನೆ ಮಾಡಿ ಹೋಗಿದ್ದಾರೆ. ಅಂತಹ ದೇವರ ಕಾಡು ಇಂದು ಕ್ಷೀಣಿಸುವ ಆತಂಕಕ್ಕೆ ಒಳಗಾಗಿದೆ. ನಮ್ಮ ಮಕ್ಕಳಿಗೆ ದೇವರ ಕಾಡುಗಳ ಬಗ್ಗೆ ಇರುವ ಹಾಡುಗಳು, ಕಥೆಗಳನ್ನು ಹೇಳುವ ಮೂಲಕ ಕಾಡಿನ ಮಹತ್ವವನ್ನು ತಿಳಿಸಿ ಕೊಡಬೇಕಾಗಿದೆ. ಕಾನೂನಿನ ಮೂಲಕ ದೇವರ ಕಾಡು ಉಳಿಸಲು ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳ ಮೂಲಕ ದೇವರು ಕಾಡುಗಳನ್ನು ಉಳಿಸಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ದೇವರ ಹೆಸರಿನಲ್ಲಿ ನಮ್ಮ ಹಿರಿಯರು ಕಾಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. 1873 ರಲ್ಲಿ ಬ್ರಿಟಿಷರು ದೇವರ ಕಾಡನ್ನು ಉಳಿಸಲು ಕಾನೂನು ರೂಪಿಸಿದ್ದರು. ಈ ಕಾನೂನು ಕಾಲ ಕ್ರಮೇಣ ಬಿಗಿಯಾಗುತ್ತಾ ಬಂದು ಇಂದಿಗೂ ದೇವರ ಕಾಡು ಉಳಿಯಲು ಸಹಕಾರಿಯಾಗಿದೆ. ದೇವರ ಕಾಡು ಮತ್ತು ಊರಿನ ಜನರ ಮಧ್ಯೆ ಒಂದು ಅವಿನಾಭಾವ ಸಂಬಂಧ ಇದೆ ಎಂದರು. ಸಂಶೋಧಕ ಎಂ.ಜಿ ನಾಗರಾಜ್ ದೇವರ ಕಾಡುಗಳ ಚಿತ್ರಣವನ್ನು ಪ್ರಾತ್ಯಕ್ಷತೆ ಮೂಲಕ ವಿವರಿಸುತ್ತಾ ಕೊಡಗಿನ ದೇವರ ಕಾಡುಗಳು ಕೇವಲ ಹಿಂದೂ ಸಂಸ್ಕೃತಿಯಿಂದ ಕೂಡಿಲ್ಲ ಇಲ್ಲಿ ಬೌದ್ಧ ಜೈನ ಸಂಸ್ಕೃತಿಗೆ ಸೇರಿದ ದೇವರುಗಳಿವೆ. ಇಲ್ಲಿನ ತೆರಾಲು ಗ್ರಾಮವು ತೆರೆದಹಾಳ ಎಂದು ಮಂಚಳ್ಳಿ ಗ್ರಾಮವು ಮಂಜುಶ್ರೀ ಎಂದು ಬೌದ್ಧ ನೆಲೆಗಳ ಹೆಸರಿನಲ್ಲಿ ಕಂಡುಬರುತ್ತವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾ ವಿದ್ಯಾಲಯದ ಪ್ರಭಾರ ಡೀನ್ ಪ್ರೊ.ಶಿವಕುಮಾರ್ ದೇಶದಲ್ಲಿಯೇ ವಿಶಿಷ್ಟ ಪರಿಸರ ಹೊಂದಿರುವ ಪ್ರದೇಶ ಕೊಡಗಾಗಿದ್ದು ದೈವಭಯದಿಂದಾದರು ಕೊಡಗಿನ ದೇವರ ಕಾಡುಗಳು ಉಳಿದಿರುವುದು ಶ್ಲಾಘನೀಯ. ವಿಜ್ಞಾನ, ದೈವ, ಪರಿಸರ ಇವುಗಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಇಂದಿನ ಪೀಳಿಗೆಗೆ ಇದರ ಅರಿವನ್ನು ಮೂಡಿಸಿ ಅರಣ್ಯವನ್ನು ಉಳಿಸಬೇಕಾಗಿದೆ ಎಂದರು. ಬೆಂಗಳೂರಿನ ನಿವೃತ್ತ ಕೃಷಿ ವಿಜ್ಞಾನಿ, ಜಿಕೆವಿಕೆ ಸಂಸ್ಥೆಯ ನಿವೃತ್ತ ಡೀನ್ ಆಗಿದ್ದ ಡಾ. ಎಂ.ಜಿ ಚಂದ್ರಕಾಂತ್ ಮಾತನಾಡಿ ವಿಶ್ವಕ್ಕೆ ಮಾದರಿಯಾಗಿರುವ ದೇವರ ಕಾಡನ್ನು ಉಳಿಸಿಕೊಳ್ಳಬೇಕು. ಕಾಡು ಉಳಿದರೆ ಸಂಸ್ಕೃತಿ ಉಳಿದಿತ್ತು ದೇವರ ಕಾಡು ಉಳಿಸಬೇಕಾದದ್ದು ಎಲ್ಲರ ಕರ್ತವ್ಯ ಎಂದರು. ಹಾತೂರು ವನಭದ್ರಕಾಳಿ ದೇವಸ್ಥಾನದ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ ಸಂವಾದದಲ್ಲಿ ಮಾತನಾಡುತ್ತಾ ಹಿಂದೆ ಕೊಡಗಿನಲ್ಲಿ 11,000 ಎಕರೆ ದೇವರ ಕಾಡಿತ್ತು ಇಂದು ಅದು 9,000 ಎಕರೆಗೆ ಇಳಿದಿದೆ. ದೇವರ ಕಾಡಿನ ರಕ್ಷಕರೇ ಭಕ್ಷಕರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟಾರ್ ಪ್ರೊ. ಕೋಡಿರ ಲೋಕೇಶ್ ಮಾತನಾಡುತ್ತಾ ಕೊಡಗಿನಲ್ಲಿ ಶೇಕಡ 33 ರಷ್ಟು ಅರಣ್ಯ ಇರಲೇಬೇಕು ಎಂದು ಬ್ರಿಟಿಷರು ಕಾಯ್ದೆ ರೂಪಿಸಿದರು ನಾವು ಅರಣ್ಯವನ್ನು ಉಳಿಸಿ ಬೆಳೆಸಿ ಕಾಪಾಡಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು. ನಿವೃತ್ತ ಪ್ರಾಂಶುಪಾಲರಾದ ಡಾ. ಜೆ. ಸೋಮಣ್ಣ ಮಾತನಾಡುತ್ತಾ ಕೊಡಗಿನ ಹಚ್ಚ ಹಸಿರನ್ನು ಉಳಿಸಿಕೊಂಡು ಕೃಷಿಯೇತರ ಚಟುವಟಿಕೆಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಬೇಕಾಗಿದೆ ಎಂದರು ಸಂವಾದದಲ್ಲಿ ಮಾತನಾಡಿದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಚಂದನ್ ಕಾಮತ್ ಇಂದಿನ ಅಭಿವೃದ್ಧಿಗೊಳ್ಳುತ್ತಿರುವ ಜಗತ್ತಿನಲ್ಲಿ ಕೃಷಿಯೇತರ ಚಟುವಟಿಕೆ ಕೂಡದು ಎಂದರೆ ತಪ್ಪಾಗುತ್ತದೆ. ಆದರೆ ಆ ಚಟುವಟಿಕೆಗಳನ್ನು ಮಾಡುವಾಗ ಕಾನೂನಿನಂತೆ ಒಂದು ಮರ ತಡಿದರೆ 10 ಮರ ನೆಡುವ ಕಾನೂನಿದ್ದು ಅದನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ ಎಂದರು. ಸಾಹಿತಿ ಸಹನಾ ಕಾಂತಬೈಲು ಮಾತನಾಡುತ್ತಾ ತಾವು ಕೊಡಗಿನ ದೇವರ ಕಾಡುಗಳ ಬಗ್ಗೆ ಪುಸ್ತಕ ರಚಿಸುತ್ತಿದ್ದು ಹಲವಾರು ದೇವಾಲಯಗಳಿಗೆ ಸ್ವತಹ ಭೇಟಿ ನೀಡಿ ಅಲ್ಲಿನ ಉತ್ಸವಗಳಲ್ಲಿ ಪಾಲ್ಗೊಂಡು ದೇವರ ಕಾಡಿನ ಬಗ್ಗೆ ಸ್ಥಳೀಯ ಜನರಲ್ಲಿರುವ ದೈವಭಕ್ತಿ ಮತ್ತು ಕಾಡಿನ ರಕ್ಷಣೆ ಕುರಿತು ಇರುವ ಆಸಕ್ತಿ ಶ್ಲಾಗಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಪ್ರೊ. ಸಿಜಿ ಕುಶಾಲಪ್ಪ ಮತ್ತು ಸಂಶೋಧಕ ಡಾ. ಎಂಜಿ ನಾಗರಾಜ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ದೇವರ ಕಾಡಿನ ಪರಿಚಯ ಮಾಡಿಕೊಡಬೇಕು. ವಿದ್ಯಾರ್ಥಿಗಳನ್ನು ಒಂದು ದಿನದ ಮಟ್ಟಿಗೆ ಆದರೂ ದೇವರ ಕಾಡಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ಮಾಹಿತಿ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಇದನ್ನು ಶಿಕ್ಷಣ ಇಲಾಖಾಧಿಕಾರಿಗಳು ಕಾನೂನು ರೀತಿಯಲ್ಲಿ ಆದೇಶಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ನ ಕಾರ್ಯದರ್ಶಿ ಶರಿ ಸುಬ್ಬಯ್ಯ, ಹಿರಿಯ ಪತ್ರಕರ್ತ ಬಿ.ಸಿ ದಿನೇಶ್,ಶಿವಣ್ಣ, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ಶೀಲಾ ಗೋಪಣ್ಣ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೆ ವಿ ರಾಮಕೃಷ್ಣ ಸ್ವಾಗತಿಸಿದರು .ನಿರ್ದೇಶಕ ಟಿ ಆರ್ ವಿನೋದ್ ವಂದಿಸಿದರು. ಶ್ರೀಮತಿ ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









