
ಚೆಟ್ಟಳ್ಳಿ ಫೆ.23 NEWS DESK : ವಿರಾಟ್ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಚೆಟ್ಟಳ್ಳಿಯಲ್ಲಿ ವಿರಾಟ್ ಹಿಂದೂ ಸಂಗಮ ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು. ಚೇರಳ, ಶ್ರೀಮಂಗಲ, ಈರಳೆವಳಮುಡಿ, ಕೂಡ್ಲೂರು ಚೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಹಿಂದೂ ಬಾಂಧವರು ಭವ್ಯ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಅಪೂರ್ವ ವೈಭವ ನೀಡಿದರು. ಶೋಭಾಯಾತ್ರೆಯು ವ್ಯಾಲಿ ಪ್ಲೇ ಶಾಲೆಯ ಮುಂಭಾಗದಿಂದ ಆರಂಭಗೊಂಡು ವಿವಿಧ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಚೆಟ್ಟಳ್ಳಿ ಪ್ರೌಢಶಾಲಾ ಆಟದ ಮೈದಾನದವರೆಗೆ ಸಾಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳ ಹಾರಾಟ, ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತ ಶಿಸ್ತುಬದ್ಧವಾಗಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಇದರಿಂದ ಪಟ್ಟಣದೂದ್ದಕ್ಕೂ ಕೇಸರಿಮಯ ವಾತಾವರಣ ನಿರ್ಮಾಣವಾಗಿ, ಚೆಟ್ಟಳ್ಳಿ ಸಂಪೂರ್ಣವಾಗಿ ಹಬ್ಬದ ಸೌರಭದಲ್ಲಿ ಮುಳುಗಿತು. ಶೋಭಾಯಾತ್ರೆಯಲ್ಲಿ ಮಹಿಳೆಯರ ಪೂರ್ಣ ಕುಂಭ ಸ್ವಾಗತ,ನೆಲ್ಲಿಹುದಿಕೇರಿಯಶ್ರೀ ಮೂಕಾಂಬಿಕಾ ಭಜನೆ ಕುಣಿತ ತಂಡ , ಉಡತ್ ಮೊಟ್ಟೆ ಭಜನೆ ಕುಣಿತ, ಬೆಳ್ಳಿ ರಥ, ಶ್ರೀ ಶಬರೀಶ್ ಚೆಂಡೆಮೇಳ ತಂಡ (ಚೆಟ್ಟಳ್ಳಿ), ಹುಲಿ ವೇಷ ಹಾಗೂ ಮಂಗಳೂರು ತಂಡದವರಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ,ಬೆಳ್ತಂಗಡಿಯ ಶ್ರೀ ಶೆಟ್ಟಿ ಆರ್ಟ್ಸ್ ಗೊಂಬೆ ಕುಣಿತ, ಬಾಳೆಗುಂಡಿ ಮತ್ತು ತ್ಯಾಗತ್ತೂರು ತಂಡದಿಂದ ಹಾಡಿ ಕುಣಿತ ನಡೆದವು. ಜೊತೆಗೆ ವಿಷ್ಣುವಿನ ಹಾಗು ವೀರಾಂಜನೇಯ ಅಲಂಕ್ರತ ಮಂಟಪ,ಈ ಎಲ್ಲ ಕಾರ್ಯಕ್ರಮಗಳು ಜನಮನ ರಂಜಿಸಿ, ಭಕ್ತಿಭಾವ ಹಾಗೂ ಸಂಭ್ರಮ ವನ್ನು ಮತ್ತಷ್ಟು ಹೆಚ್ಚಿಸಿದವು. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವಯೋಮಾನದವರು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ನಂತರ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪಬೆಳಗಿ ಭಾರತಾಂಬೆಗೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜು ಒಂದೇ ಮಾತರಂ ಗೀತೆಯನ್ನು ಹಾಡಿದರು. ಸಭೆಯಲ್ಲಿ ಸಂವಿಜ್ಞಾನ ತಜ್ಞರು ಹಾಗು ಸಾಮಾಜಿಕ ಕಾರ್ಯಕರ್ತರಾದ ಮಂಡ್ಯದ ಡಾ. ಸುಧಾಕರ ಹೊಸಳ್ಳಿ, ಕೊಡಗು ಗೌಡ ಸಮಾಜ ಮಡಿಕೇರಿಯ ನಿಕಟ ಪೂರ್ವ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಕಾಫಿ ಬೆಳೆಗಾರ ತಿರುಮಲೇಶ್ ಭಟ್, ಅವರ್ಸ್ ಕ್ಲಬ್ ನ ಕಾರ್ಯದರ್ಶಿ ಕೊಂಗೇಟಿರ ವೀಣಾ ಅಪ್ಪಣ್ಣ , ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷೆ ಪಿ.ಕೆ.ಲೀಲಾ, ವಿರಾಟ್ ಹಿಂದೂ ಸಂಗಮದ ಆಯೋಜನ ಸಮಿತಿಯ ಸಂಯೋಜಕ ಪೇರಿಯನ ಉದಯಕುಮಾರ್ ಹಾಜರಿದ್ದರು. ಶಿಕ್ಷಕಿ ಉಮಾರಾಣಿ ಸ್ವಾಗತಿಸಿದರು. ಪೇರಿಯನ ಉದಯ ವಂದಿಸಿದರು. ಬಲ್ಲಾರಂಡ ಕಂಠಿಕಾರ್ಯಪ್ಪ ನಿರೂಪಿಸಿದರು.
ವರದಿ : ಪುತ್ತರಿರ ಕರುಣ್ ಕಾಳಯ್ಯ









