

ಮಡಿಕೇರಿ ಫೆ.25 NEWS DESK : ನಗರದ ಅಭಿವೃದ್ಧಿಯ ನಿರ್ಲಕ್ಷ್ಯ ಮತ್ತು ರಸ್ತೆಗಳ ಅವ್ಯವಸ್ಥೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿತು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರ ನೇತೃತ್ವದಲ್ಲಿ ಬುಧವಾರ ನಗರಸಭಾ ಕಛೇರಿಯ ಎದುರು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು “ಗುಂಡಿ ಮುಚ್ಚಿ ರಸ್ತೆಗೆ ಮುಕ್ತಿ ಕೊಡಿ” ಎಂದು ಆಗ್ರಹಿಸಿದರು. ನಗರಸಭೆಯ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿಸಿದ ಎಸ್‍ಡಿಪಿಐ ಸದಸ್ಯರು, ‘ನಗರಸಭೆ ಕೊಠಡಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಬರೆದಿರುವ ನಾಮ ಫಲಕವನ್ನು ನಗರಸಭೆಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ಕಚೇರಿಗೆ ಅಂಟಿಸುವ ಪ್ರಯತ್ನ ಮಾಡಿದರು. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಈ ಪ್ರಯತ್ನವನ್ನು ತಡೆದರು. ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಪ್ರತಿನಿತ್ಯ ಪ್ರವಾಸಿ ಕೇಂದ್ರವಾದ ಮಡಿಕೇರಿಗೆ ಆಗಮಿಸುವ ಸಹಸ್ರಾರು ಪ್ರವಾಸಿಗರನ್ನು ಗುಂಡಿಬಿದ್ದು ಹದಗೆಟ್ಟ ರಸ್ತೆಗಳು, ಅಶುಚಿತ್ವ ಸ್ವಾಗತಿಸುತ್ತಿದೆ. ನಗರದ ಯಾವುದೇ ರಸ್ತೆಗಳು ಯೋಗ್ಯವಾಗಿಲ್ಲ. ಜನರ ಸಂಕಷ್ಟಗಳಿಗೆ ನಗರಸಭೆಯಿಂದ ಯಾವುದೇ ಸ್ಪಂದನ ದೊರಯುತ್ತಿಲ್ಲವೆಂದು ಟೀಕಿಸಿದರು. ಕೇಬಲ್ ಮತ್ತು ಅಮೃತ್ ಯೋಜನೆಯ ಪೈಪ್ ಗಳ ಅಳವಡಿಕೆಗಾಗಿ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡರು ರಸ್ತೆಗಳನ್ನು ಸರಿಪಡಿಸದೆ ಹಾಗೆಯೇ ಬಿಡಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರಿಂದ ದುರಸ್ತಿ ಕಾರ್ಯ ಮಾಡಿಸಲು ಸಾಧ್ಯವಾಗದ ದುಸ್ಥಿತಿ ನಗರಸಭೆಗೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭಾ ಕಚೇರಿ ಬಳಿಯ ಹಳೆಯ ಕಾವೇರಿ ಕಲಾಕ್ಷೇತ್ರದ ಸ್ಥಳದಲ್ಲಿ 9.50 ಕೋಟಿ ರೂ. ವೆಚ್ಚದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಕಲಾಕ್ಷೇತ್ರ ನಿರ್ಮಾಣದ ಯೋಜನೆಯನ್ನು ರೂಪಿಸಿ ನಾಲ್ಕು ವರ್ಷಗಳೇ ಕಳೆದಿದ್ದರೂ ಇಲ್ಲಿಯವೆರೆಗೆ ಕಾಮಗಾರಿ ಆರಂಭಗೊಂಡಿಲ್ಲ. ನಗರೋತ್ಥಾನದ ನಾಲ್ಕನೇ ಹಂತದ ಕಾಮಗಾರಿಗಳು ಇಂದಿಗೂ ಸಮರ್ಪಕವಾಗಿ ನಡೆಯುತ್ತಿಲ್ಲ. ಮಳೆಗಾಲ ಆರಂಭಕ್ಕೆ ಇನ್ನೆರಡು ತಿಂಗಳಷ್ಟೇ ಬಾಕಿ ಇದೆ. ಈ ಹಂತದಲ್ಲು ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರಸಭಾ ಅಧ್ಯಕ್ಷರಾಗಿ ಕಲಾವತಿ ಅವರು ಅಧಿಕಾರ ಸ್ವೀಕರಿಸಿದ ನಂತರ 9 ಸಭೆಗಳು ನಡೆಯಬೇಕಾಗಿತ್ತು, ಆದರೆ ಇಲ್ಲಿಯವರೆಗೆ ನಡೆದಿರುವುದು ಕೇವಲ ನಾಲ್ಕು ಸಭೆಗಳು, ನಾಲ್ಕು ಸ್ಥಾಯಿ ಸಮಿತಿ ರಚನೆಯಾಗಿ ಎರಡು ತಿಂಗಳು ಕಳೆದಿದ್ದು, 15 ದಿನಗಳಿಗೊಮ್ಮೆ ಸ್ಥಾಯಿ ಸಮಿತಿ ಸಭೆ ನಡೆಯಬೇಕಾಗಿತ್ತು. ಇಲ್ಲಿಯವರೆಗೆ ಸಭೆ ಮತ್ತು ಅಭಿವೃದ್ಧಿ ಕಾರ್ಯಗಳ ಚರ್ಚೆಗಳೇ ನಡೆದಿಲ್ಲವೆಂದು ಗಮನ ಸೆಳೆದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಸಭಾಧ್ಯಕ್ಷೆ ಪಿ.ಕಲಾವತಿ ಹಾಗೂ ಮಹೇಶ್ ಜೈನಿ ಅವರೊಂದಿಗೆ ಮಾತನಾಡಿದ ಅಮೀನ್ ಮೊಹಿಸಿನ್, ಮುಂದಿನ 10 ದಿನಗಳ ಒಳಗಾಗಿ ರಸ್ತೆಗಳ ಅಭಿವೃದ್ಧಿ, ಕಲಾಕ್ಷೇತ್ರದ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಚರ್ಚೆ ನಡೆಸಲು ಸಭೆಯನ್ನು ಕರೆಯುವಂತೆ ಆಗ್ರಹಿಸಿದರು. ನಗರ ವ್ಯಾಪ್ತಿಯಲ್ಲಿ ನಿವೇಶನಗಳಿಗಾಗಿ ಕಳೆದ ಹದಿನೈದು ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಬಡವರ ಸಂಖ್ಯೆ 4500 ರಷ್ಟಿದೆ. ಇವರಿಗೆ ನಿವೇಶನ ಒದಗಿಸುವ ಕುರಿತು ವಿಶೇಷ ಸಭೆಯಲ್ಲಿ ಚರ್ಚಿಸಬೇಕು ಎಂದರು. ಪ್ರತಿಭಟನೆಯಲ್ಲಿ ನಗರಸಭೆಯ ಎಸ್‍ಡಿಪಿಐ ಸದಸ್ಯರುಗಳಾದ ಎಂ.ಕೆ.ಮನ್ಸೂರ್ ಆಲಿ, ನೀಮಾ ಅರ್ಷದ್, ಬಷೀರ್ ಅಹಮ್ಮದ್, ಮೇರಿ ವೇಗಸ್, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಮೊಹಮ್ಮದ್ ಅಲಿ, ಸದಸ್ಯ ಜಲೀಲ್, ಪಕ್ಷದ ಪ್ರಮುಖರಾದ ಎಂ.ಎ.ಅಬ್ದುಲ್ ರಜಾಕ್, ಮೈಕೆಲ್ ವೇಗಸ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.









