
ಮಡಿಕೇರಿ NEWS DESK ಮಾ.5 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್ ಕೊಡಗಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು ಮತ್ತು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಮುಖ್ಯಮಂತ್ರಿಗಳು ಹಿಂದಿನ ಬಜೆಟ್ ಗಳಲ್ಲಿ ಕೊಡಗಿಗೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆ ಅಥವಾ ವಿಶೇಷ ಅನುದಾನವನ್ನು ನೀಡಿರಲಿಲ್ಲ. ಈ ಬಾರಿಯಾದರೂ ಇಬ್ಬರು ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕೊಡಗಿಗೆ ಅಗತ್ಯವಿರುವ ಯೋಜನೆಗಳನ್ನು ಮಂಡಿಸುವoತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅಂದಿನ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ.ಸುನಿಲ್ ಸುಬ್ರಮಣಿ ಹಾಗೂ ಎಂ.ಪಿ.ಸುಜಾ ಕುಶಾಲಪ್ಪ ಅವರುಗಳು ಅಂದು ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೆಡಿಕಲ್ ಕಾಲೇಜು, ಅಸ್ಟ್ರೋ ಟರ್ಫ್ ಹಾಕಿ ಮೈದಾನ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ನ್ಯಾಯಾಲಯ, ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಅಗ್ನಿಶಾಮಕ ದಳದ ಠಾಣೆ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ರೈತರಿಗೆ ಸಕಾಲದಲ್ಲಿ ಬೆಳೆ ಪರಿಹಾರವನ್ನು ನೀಡಲಾಗುತ್ತಿತ್ತು. ಬಿಜೆಪಿ ಶಾಸಕರುಗಳ ಪ್ರಯತ್ನದ ಫಲವಾಗಿ ಸರಕಾರ ಬಜೆಟ್ ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ ನೀಡುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಕಳೆದ 2 ಬಜೆಟ್ ನಲ್ಲಿ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಕಾಳಜಿ ತೋರಿಲ್ಲ, ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಘೋಷಿಸಿಲ್ಲ. ಸರ್ವಋತು ರಸ್ತೆಗಳ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿಲ್ಲ, ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದರೂ ಕ್ರೀಡಾ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ರೈತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಮತ್ತು ಬೆಳೆ ಪರಿಹಾರ ಬಿಡುಗಡೆ ಮಾಡಿಲ್ಲ. ಒಟ್ಟಿನಲ್ಲಿ ಕೊಡಗಿನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಹೇಶ್ ಜೈನಿ ಆರೋಪಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಾದರೂ ಮುಖ್ಯಮಂತ್ರಿಗಳು ಕೊಡಗಿನ ಸಂಪೂರ್ಣ ಚಿತ್ರಣವನ್ನು ಅವಲೋಕಿಸಿ ಅಭಿವೃದ್ಧಿಪರ ಬಜೆಟ್ ಮಂಡಿಸಲಿ ಮತ್ತು ಇಬ್ಬರು ಶಾಸಕರು ಸರಕಾರದ ಮೇಲೆ ಒತ್ತಡ ಹೇರಲಿ ಎಂದು ಮಹೇಶ್ ಜೈನಿ ಒತ್ತಾಯಿಸಿದ್ದಾರೆ.








