
ಮಡಿಕೇರಿ ಏ.17 NEWS DESK : ಯುವ ಪೀಳಿಗೆ ಇತರ ಜಿಲ್ಲೆಯಲ್ಲಿ ಉದ್ಯೋಗ ಪಡೆದರೂ, ಎಷ್ಟೇ ಹಣ, ಕೀರ್ತಿ ಗಳಿಸಿದರೂ ತಮ್ಮ ಬಾಲ್ಯ, ಬೆಳೆದ ಪರಿಸರ ಮತ್ತು ಆಸರೆಯಾದ ಊರನ್ನು ಮರೆಯಬಾರದು ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಎಸ್.ಸುರೇಶ್ ನಂಜಪ್ಪ ಸಲಹೆ ನೀಡಿದ್ದಾರೆ. ಬೆಂಗಳೂರು ಕೊಡವ ಸಮಾಜದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಕಾವೇರಿ ಪ್ಲೆಸ್‍ಮೆಂಟ್‍ಸೆಲ್ ಹಾಗೂ ಅಡೆಕ್ಕೊ ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿದ ಊರು ನಮಗೆ ಸಂಸ್ಕಾರ, ಸಂಸ್ಕೃತಿ ಮತ್ತು ಬದುಕಿನ ಪಾಠ ಕಲಿಸಿಕೊಡುತ್ತದೆ. ಆ ಊರಿನ ಮಣ್ಣಿನ ಋಣ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವು ಎಷ್ಟೇ ಹಣ, ಕೀರ್ತಿ ಪಡೆದರೂ ಅವಕಾಶವಿದ್ದಾಗ ಕೊಡಗಿನ ಅಭಿವೃದ್ಧಿಗೆ ಅಥವಾ ಇಲ್ಲಿನ ಜನರ ಸಹಾಯಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಚಿರಿಯಪಂಡ ಎಸ್.ಸುರೇಶ್ ನಂಜಪ್ಪ ಕರೆ ನೀಡಿದರು. ಬೆಂಗಳೂರು ಕೊಡವ ಸಮಾಜಕ್ಕೆ 114 ವರ್ಷಗಳ ಹಳೆಯ ಇತಿಹಾಸವಿದ್ದು, ಕೊಡಗಿನ ಉದ್ಯೋಗಾಕಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ಮಹಿಳಾ ಕಾಲೇಜಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಬೆಂಗಳೂರು ಕೊಡವ ಸಮಾಜ ಕೇವಲ ಸಮುದಾಯದ ಮಂದಿಗೆ ಮಾತ್ರವಲ್ಲದೇ ಯಾವುದೇ ಜಾತಿ, ಧರ್ಮ, ಭೇದ-ಭಾವ ಇಲ್ಲದೆ ಅರ್ಹ ಅಭ್ಯರ್ಥಿಗಳು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಪ್ರಮುಖ ಆದ್ಯತೆ ನೀಡಿದೆ ಎಂದು ತಿಳಿಸಿದರು. ಪಿಯುಸಿ, ಪದವಿ ಮುಗಿದ ನಂತರ ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಗೊಂದಲ ಇರುತ್ತದೆ. ಅದನ್ನು ನಿವಾರಿಸುವ ಸಲುವಾಗಿ ಬೆಂಗಳೂರು ಕೊಡವ ಸಮಾಜ ಮಡಿಕೇರಿ, ಗೋಣಿಕೊಪ್ಪದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ನಿರುದ್ಯೋಗಿಗಳು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಣ್ಣ ಉದ್ಯೋಗ ಎಂದು ಹಿಂಜರಿಯಬಾರದು. ಸಿಕ್ಕ ಸಣ್ಣ ಉದ್ಯೋಗ ಮತ್ತೆ ದೊಡ್ಡ ಅವಕಾಶ ಕಲ್ಪಿಸಿಕೊಡುತ್ತದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸುರೇಶ್ ನಂಜಪ್ಪ ಅವರು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿಯೂ ಉದ್ಯೋಗ ಮೇಳ ನಡೆಸಲಿದ್ದು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ಅಡೆಕ್ಕೊ ಇಂಡಿಯಾ ಸಂಸ್ಥೆಯ ನಿರ್ದೇಶಕರಾದ ಕೊಂಗಂಡ ಜಿ.ಸಂಕೇತ್ ಚೆಂಗಪ್ಪ ಅವರು ಮಾತನಾಡಿ, “ಅಡೆಕ್ಕೊ” ಎಂಬುದು ಸ್ವಿಜಲೆರ್ಂಡ್ ಮೂಲದ ವಿಶ್ವದ ಅತಿದೊಡ್ಡ ಮಾನವ ಸಂಪನ್ಮೂಲ ಮತ್ತು ನೇಮಕಾತಿ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಶಾಖೆ ಹೊಂದಿದೆ. ಇದು ತಾತ್ಕಾಲಿಕ ಮತ್ತು ಶಾಶ್ವತ ಉದ್ಯೋಗಾವಕಾಶ ಒದಗಿಸುತ್ತದೆ. ಅಲ್ಲದೆ, ಸಂಬಳ ನಿರ್ವಹಣೆ ಮತ್ತು ಉದ್ಯೋಗಿಗಳ ತರಬೇತಿಯಂತಹ ಸೇವೆಗಳನ್ನು ಸಹ ನೀಡುತ್ತದೆ. ಇದು ಉದ್ಯೋಗ ಮೇಳದ ಮೂಲಕ ಸುಮಾರು 7 ಲಕ್ಷ ಉದ್ಯೋಗಾಕಾಂಕ್ಷಿಗಳಿಗೆ ಬೆಂಗಳೂರಿನ ವಿವಿಧ ಶಾಖೆಗಳಲ್ಲಿ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ ಎಂದು ವಿವರಿಸಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಎಚ್.ಪಿ.ನಿರ್ಮಲ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕಾಗಿ ಪೈಪೋಟಿಗಳು ಹೆಚ್ಚಿದ್ದು, ಅಭ್ಯರ್ಥಿಗಳು ಲಭ್ಯವಿರುವ ಅವಕಾಶ ಸದುಪಯೋಗಪಡಿಸಿಕೊಂಡು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಕೊಡಗಿನಲ್ಲಿ ಕೌಶಲ್ಯಾಧಾರಿತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಂತಾಗಬೇಕು ಎಂದರು. ಉದ್ಯೋಗ ಮೇಳದಲ್ಲಿ ಆಪಲ್ ಮತ್ತು ಟಾಟಾ ಕಂಪನಿ ಪಾಲ್ಗೊಂಡಿದ್ದವು. ಕೊಡಗಿನ ವಿವಿಧಡೆಯಿಂದ 75 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಆಯ್ಕೆಯಾದ 65 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ಕಾಲೇಜು ವತಿಯಿಂದ ಚಿರಿಯಪಂಡ ಎಸ್.ಸುರೇಶ್ ನಂಜಪ್ಪ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹಬೀಬ್ ಅಹಮದ್, ರೇವತಿ ರಮೇಶ್, ರಿಯಾಜುದ್ದೀನ್, ಪ್ರೇಮ ನಿಂಗಪ್ಪ ಮತ್ತು ಪ್ರೇಮ ಕೃಷ್ಣಪ್ಪ, ಅಡೆಕ್ಕೊ ಇಂಡಿಯಾ ಸಂಸ್ಥೆಯ ನಿರ್ದೇಶಕರಾದ ದೀಪಕ್ ಗುಪ್ತ, ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷರಾದ ಕಿಶನ್ ಕಾವೇರಿಯಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಪ್ರಮುಖರು, ಬೋಧಕ-ಬೋಧಕೇತರರು, ಉದ್ಯೋಗಾಕಂಕ್ಷಿಗಳು, ವಿದ್ಯಾರ್ಥಿಗಳು ಇತರರು ಇದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉದ್ಯೋಗ ಮೇಳ ಸಂಚಾಲಕರು ಹಾಗೂ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಎಸ್.ವೇಣುಗೋಪಾಲ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉದಯಕುಮಾರ್ ನಿರೂಪಿಸಿದರು, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಎಚ್.ಪಿ.ಸುದೇಶ್ ವಂದಿಸಿದರು.









