ಮಡಿಕೇರಿ
ಏ.21 NEWS DESK : ಕೊಡವರ ಹೊಸವರ್ಷ ಎಡಮ್ಯಾರ್ ಮಾಸಿಕ ಸ್ಮರಣಾರ್ಥ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನಲ್ಲಿ ಹಿರಿಯರಿಗೆ ಪುಷ್ಪನಮನ ಸಲ್ಲಿಸಿತು. ಕೊಡವ ನರಮೇಧ ದುರಂತ ಹತ್ಯಾಕಾಂಡ ಸ್ಮಾರಕ ಸ್ಥಳ ದೇವಟ್ ಪರಂಬುವಿಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಭೇಟಿ ನೀಡಿದ ಸದಸ್ಯರು ಹಿರಿಯರನ್ನು ಸ್ಮರಿಸಿ ಪುಷ್ಪನಮನ ಅರ್ಪಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ವೆನಿಸ್ ಚಾರ್ಟರ್ 1964ರ ವಿಧಿ 7 ಮತ್ತು ಭಾರತೀಯ ಸಂವಿಧಾನದ ವಿಧಿ 49ರ ಅಡಿಯಲ್ಲಿ ದೇವಟ್ ಪರಂಬ್ ಹತ್ಯಾಕಾಂಡ ಸ್ಥಳದಲ್ಲಿ “ಅಂತಾರಾಷ್ಟ್ರೀಯ ಕೊಡವ ಜನಾಂಗೀಯ ಹತ್ಯಾಕಾಂಡ ಸ್ಮಾರಕ’ವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ದೇವಟ್ ಪರಂಬ್ ದುರಂತ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹತ್ಯಾಕಾಂಡ ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕು. ಸೂಕ್ಷ್ಮ, ಏಕ-ಜನಾಂಗೀಯ, ಆದಿಮಸಂಜಾತ, ಅನಿಮಿಸ್ಟಿಕ್ ನಂಬುಗೆಯ, ಪ್ರಕೃತಿಯನ್ನು ಆರಾಧಿಸುವ ಕೊಡವ ಯೋಧ ಕುಲಕ್ಕೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕು. ಕೊಡವ ಯೋಧ ಕುಲವನ್ನು ಭಾರತೀಯ ಸಂವಿಧಾನದ ಬುಡಕಟ್ಟು ಪಟ್ಟಿಗೆ ಸೇರ್ಪಡೆಗೊಳಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಆದಿಮಸಂಜಾತ ಜನರ ಆಸ್ತಿ ಮರುಪಡೆಯುವಿಕೆ ಕಾನೂನಿನ ಅಡಿಯಲ್ಲಿ ಕೊಡವರ ವಂಶಪಾರಂಪರ್ಯ ಆಸ್ತಿಗಳನ್ನು ಮರಳಿ ಕೊಡವರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಹೊರಗಿನ ಆಡಳಿತಗಾರರು ಮತ್ತು ಟಿಪ್ಪು-ಹೈದರ್ ಆಡಳಿತದ ನಡುವಿನ ಮೈತ್ರಿಯೇ ಕೊಡವ ಜನಾಂಗೀಯ ಹತ್ಯಾಕಾಂಡಕ್ಕೆ ಮೂಲ ಕಾರಣವಾಗಿದೆ. ಏಕ-ಜನಾಂಗೀಯ, ಆದಿಮಸಂಜಾತ ಕೊಡವ ಯೋಧ ಕುಲವು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದ ವಿರುದ್ಧ ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿ ಕೋಟೆಯಲ್ಲಿ 31 ಕ್ಕೂ ಹೆಚ್ಚು ಬಾರಿ ಹೋರಾಡಿ, ನಾಲ್ಕೂ ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಭಾಗವಹಿಸಿ ಕೊಡಗು ರಾಜ್ಯವನ್ನು ರಕ್ಷಿಸಿದ್ದರು. ಪದೇ ಪದೇ ಸೋಲನ್ನು ಅನುಭವಿಸಿದ್ದಕ್ಕೆ ಪ್ರತೀಕಾರವಾಗಿ, ಟಿಪ್ಪು ದೇವಟ್ ಪರಂಬುವಿನಲ್ಲಿ ಮೋಸದ ಶಾಂತಿ ಒಪ್ಪಂದದ ಮೂಲಕ ಆದಿಮಸಂಜಾತ ಕೊಡವ ಜನಾಂಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಂಚು ಹೂಡಿದನು. ಇದು ಅತ್ಯಂತ ದುರಂತ ಘಟನೆ ಎಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು. ಕೊಡವರನ್ನು ಬಹುಸಂಖ್ಯಾತ ವಿಭಾಗಗಳೊಂದಿಗೆ ವಿಲೀನಗೊಳಿಸಲಾಗಿದೆ. ಕೊಡವರು ಯಾವುದೇ ಜಾತಿ ಅಥವಾ ಧರ್ಮವಲ್ಲ, ಕೊಡವರಿಗೆ ಕಾನೂನಿನಲ್ಲಿ ವಿಶೇಷ ಸ್ಥಾನದ ಅಗತ್ಯವಿದೆ. 2027ರ ರಾಷ್ಟ್ರೀಯ ಜನಗಣತಿಯಲ್ಲಿ ಮತ್ತು ಭಾರತದ ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಂ ಅನ್ನು ಮೀಸಲಿಡಬೇಕು. ಇದರಿಂದ ಸೂಕ್ಷ್ಮ ಜನಾಂಗ ಕೊಡವರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸುತ್ತದೆ ಎಂದರು. ಇತಿಹಾಸಕಾರರೊಬ್ಬರು ಕೊಡವರ ಇತಿಹಾಸವನ್ನು ತಿರುಚಿ ಕೊಡವರ ನ್ಯಾಯಯುತ ಸಾಂವಿಧಾನಿಕ ಹಕ್ಕುಗಳನ್ನು ತಡೆಯಲು ಮತ್ತು ನಿಷ್ಟ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದು, ಕೊಡವರು ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಕುಶ, ಮಂದಪಂಡ ಮನೋಜ್ ಮಂದಣ್ಣ ಹಾಗೂ ಚೀಯಬೇರ ಸತೀಶ್ ಪಾಲ್ಗೊಂಡು ಸಿಎನ್‍ಸಿ ಬೇಡಕೆಗಳಿಗೆ ಬೆಂಬಲ ಸೂಚಿಸಿದರು.









