
ಮಡಿಕೇರಿ ಏ.23 NEWS DESK : ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತಾಂತರ ಮತ್ತು ದೌರ್ಜನ್ಯ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮತಾಂತರ, ಲವ್ ಜಿಹಾದ್, ಕಾರ್ಪೋರೇಟ್ ಜಿಹಾದ್, ಲ್ಯಾಂಡ್ ಜಿಹಾದ್, ಗೋ ಹತ್ಯೆ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂವಿಧಾನ ಬಾಹಿರವಾಗಿರುವ ಇಂತಹ ಘಟನೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೆಲವು ಜಿಮ್ ಗಳಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ತರಬೇತಿ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಕೆಲವು ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಮತಾಂತರ, ಗೋಮಾಂಸ ಸೇವನೆ ಸಹಿತ ಭಯೋತ್ಪಾದಕ ಕೃತ್ಯಗಳಿಗೂ ಹಿಂದೂ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸಲ್ಲಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಹಿಂದೂ ಸಂಘಟನೆಗಳ ಪ್ರಮುಖರಾದ ಪುದಿಯೊಕ್ಕಡ ರಮೇಶ್, ವಿನಯ್, ಚೇತನ್, ಗಣೇಶ್ ರೈ, ಸತ್ಯ ಕರ್ಕೆರ, ಬಿಜೆಪಿ ಪದಾಧಿಕಾರಿಗಳಾದ ಬಿ.ಕೆ.ಜಗದೀಶ್, ಮನು ಮಂಜುನಾಥ್, ಡೀನ್ ಬೋಪಣ್ಣ, ಪೂಣಚ್ಚ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









