
ಮೈಸೂರು ಏ. 25 NEWS DESK : ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಂಸದರು, ಕ್ಷಿಪ್ರಗತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ದೀರ್ಘಕಾಲೀನ ಯೋಜನೆಗೆ ಸ್ಪಷ್ಟ ರೂಪ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು. ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರವಾದ ಯೋಜನಾ ವರದಿ (DPR) ಅನ್ನು ಶೀಘ್ರದಲ್ಲಿ ಸಿದ್ಧಪಡಿಸಲು ಅಧಿಕಾರಿಗಳು ಮುಂದಾಗಬೇಕು. ಈ ಯೋಜನೆಗೆ ಅಗತ್ಯವಿರುವ ಉಳಿದ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ವೇಗಗೊಳಿಸಲು ಸಂಬಂಧಿತ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ತಿಳಿಸಿದರು. ರ್ಘಕಾಲೀನ ಸಂಪರ್ಕ ಯೋಜನೆ ಅಗತ್ಯ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ದೀರ್ಘಕಾಲೀನ ಪರಿಹಾರ ಒದಗಿಸುವುದು ನಮ್ಮ ಉದ್ದೇಶವಾಗಿದ್ದು, ಕಡಿಮೆ ಅವಧಿಗೆ ವಿಮಾನ ಸಂಚಾರ ನಡೆಸುವುದು ಗುರಿಯಲ್ಲ. ಪ್ರಮುಖ ನಗರಗಳೊಂದಿಗೆ ನಿರಂತರ ಹಾಗೂ ಪೂರ್ಣಕಾಲಿಕ ದೀರ್ಘಕಾಲೀನ ವಿಮಾನ ಸಂಪರ್ಕವನ್ನು ಸ್ಥಾಪಿಸುವುದು ನಮ್ಮ ಧ್ಯೇಯ ಎಂದು ಯದುವೀರ್ ಒಡೆಯರ್ ವಿವರಿಸಿದರು. ಇದಕ್ಕಾಗಿ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮೈಸೂರಿನಿಂದ ಶಾಶ್ವತ ಹಾಗೂ ವಿಶ್ವಾಸಾರ್ಹ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು. ಎಲ್ಲಾ ಅಧಿಕಾರಿಗಳು ವೇಗವಾಗಿ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಆದೇಶಿಸಿದರು. ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ವಿಮಾನ ನಿಲ್ದಾಣ ನಿರ್ದೇಶಕಿ ಪಿ.ವಿ. ಉಷಾ ಕುಮಾರಿ, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರಾಧ್ಯ, ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂ.ಸಿ. ಮಲ್ಲಿಕಾರ್ಜುನ ಹಾಗೂ ಭಾಸ್ಕರ್ ಕಲಾಲೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.









