
ಮಡಿಕೇರಿ ಏ.25 NEWS DESK : ಕರ್ನಾಟಕ ಸರಕಾರದ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದಿಂದ ರಚಿಸಲ್ಪಟ್ಟಿರುವ ಕೊಡಗು ಜಿಲ್ಲಾ ಜಾಗೃತಿ ಸಮಿತಿಯ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಭೆಯು ಜಿಲ್ಲಾ ಸಂಚಾಲಕ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಪತ್ರಿಕಾ ಭವನದಲ್ಲಿ ನಡೆಯಿತು. ಸಮಿತಿ ಸದಸ್ಯರಾಗಿರುವ ಪತ್ರಕರ್ತ ರಂಜಿತ್ ಕವಲಪಾರ ಅವರನ್ನು ಜಿಲ್ಲಾ ಜಾಗೃತ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಮೊದಲನೇ ಕಾರ್ಯಕ್ರಮವಾಗಿ ವಿಶ್ವ ಪುಸ್ತಕ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರ ಮನವೊಲಿಸಿ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನ ಮಾಡುವಂತೆ ತೀರ್ಮಾನಿಸಲಾಯಿತು. ಪ್ರಾರಂಭಿಕವಾಗಿ ಮೇ ತಿಂಗಳಿನಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಎರಡು ಮನೆಗಳನ್ನು ಆಯ್ಕೆ ಮಾಡಿ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನ ಮಾಡುವಂತೆಯೂ ಆ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ಡಾ.ಮಾನಸ ಅವರನ್ನು ಆಹ್ವಾನಿಸುವಂತೆ ತೀರ್ಮಾನಿಸಲಾಯಿತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸಭೆಯಲ್ಲಿ ಸದಸ್ಯರುಗಳಾದ ಟಿ.ಪಿ ರಮೇಶ್, ಬಿ.ಎನ್ ಪ್ರಕಾಶ್ ಕೆ.ವಿ ಉಮೇಶ್, ಎಚ್.ಎಲ್ ದಿವಾಕರ್, ಪ್ರತಿಮಾ ಹರೀಶ್ ರೈ ಉಪಸ್ಥಿತರಿದ್ದರು.









