
ವಿರಾಜಪೇಟೆ NEWS DESK ಏ.27 : ಸಮೀಪದ ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಮೂರು ದಿವಸಗಳ ಕಾಲ ಜರುಗಿದ ಮಕ್ಕಳ ವೈದಿಕ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು. ಮೊದಲ ದಿವಸ ಈ ಶಿಬಿರಕ್ಕೆ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಉಪಾಧ್ಯಕ್ಷರಾದ ನಂದ ಬೋರ್ಕರ್ ರವರು ಚಾಲನೆಯನ್ನು ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ಕಳತ್ಮಾಡು ವಿನ ಅರ್ಚಕ ಶ್ರೇಯಸ್ ಭಟ್ ರವರು ವೈದಿಕ ಶಿಬಿರದ ಪ್ರಯುಕ್ತ ಮಕ್ಕಳಿಗೆ ವಿವಿಧ ತರಬೇತಿಯನ್ನು ನೀಡಿದರು.ಅರ್ಚಕರು ವಟುಗಳಿಗೆ ಸಂಧ್ಯಾ ವಂದನೆ, ಕುಲದೇವರ ಪೂಜಾ ವಿಧಾನಗಳು, ಮಂತ್ರ ಪಠಣೆ, ಶ್ಲೋಕ ಪಠಣ, ಜನಿವಾರ ಧರಿಸುವ ವಿಧಾನಗಳು, ಶ್ರೀ ಸತ್ಯನಾರಾಯಣ ಪೂಜೆಯ ಮಂತ್ರಗಳು, ಪಂಚಗವ್ಯದ ಪೂಜಾ ವಿಧಾನ ಇನ್ನೂ ಮುಂತಾದ ಪೂಜಾ ವಿಧಾನಗಳ ಕುರಿತು ತರಬೇತಿಯನ್ನು ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯೆ ಸಂಗೀತ ರವರು ಮಕ್ಕಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಹೆಗ್ಗಳ ಗ್ರಾಮದ ಸುರೇಶ್ ರವರು ಧರ್ಮ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಮೂರನೆಯ ದಿವಸದಂದು ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಪಿ. ಸಂತೋಷ್, ಉಪಾಧ್ಯಕ್ಷ ಶೈಲೇಶ್ ಕಾಮತ್, ಕಾರ್ಯದರ್ಶಿ ಬಿ. ಎನ್. ಶಾಂತಿಭೂಷಣ್, ಸದಸ್ಯರುಗಳು, ಮಕ್ಕಳ ಪೋಷಕರುಗಳು ಉಪಸ್ಥಿತರಿದ್ದರು.









