
ಮಡಿಕೇರಿ ಏ.27 NEWS DESK : ಮಹಿಳಾ ಮೀಸಲಾತಿಯ “ನಾರಿ ಶಕ್ತಿ ವಂದನ್” ವಿಧೇಯಕವನ್ನು ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳಿಗೆ ಅನ್ವಯಿಸಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸಹಿ ಅಭಿಯಾನಕ್ಕೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಅವರು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ, ಬೋರ್ಡ್‍ನಲ್ಲಿ ಸಹಿ ಮಾಡುವ ಮೂಲಕ ಅಭಿüಯಾನಕ್ಕೆ ಚಾಲನೆಯನ್ನಿತ್ತರು. ಕೇಂದ್ರದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಮಹಿಳೆಯರಿಗೆ ಮೀಸಲಾತಿ ನೀಡುವ ವಿಧೇಯಕದೊಂದಿಗೆ ಕ್ಷೇತ್ರ ಪುನರ್ವಿಂಗಡಣೆಯನ್ನು ಸೇರ್ಪಡೆಮಾಡಿರುವುದನ್ನು ವಿರೋಧಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಿಗೆ ಸಂಬಂಧಿಸಿದಂತೆ ಮಹಿಳಾ ಮೀಸಲಾತಿಯನ್ನು ಅನ್ವಯಿಸಿ ಜಾರಿಗೆ ತರುವಂತೆ ಕೇಂದ್ರವನ್ನು ಒತ್ತಾಯಿಸಿದರು. ಸಹಿ ಅಭಿಯಾನದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶೀಲಾ ಡಿಸೋಜ, ಮಹಿಳಾ ಕಾಂಗ್ರೆಸ್ ಸದಸ್ಯರು ಹಾಗೂ ಜಿಪಂ ಮಾಜಿ ಸದಸ್ಯರಾದ ಸುನೀತ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುಬೀನಾ ಎಂ.ಎ., ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾದ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ, ಕುಶಾಲನಗರ ವಲಯ ಅಧ್ಯಕ್ಷರಾದ ಕೆ.ಆರ್.ಸವಿತಾ, ಪ್ರಮುಖರಾದ ಮುಕ್ಕಾಟಿರ ಕಾವೇರಮ್ಮ, ಲೀಲಾ ಶೇಷಮ್ಮ ಸೇರಿದಮತೆ ಹಲ ಪ್ರಮುಖರು ಪಾಲ್ಗೊಂಡಿದ್ದರು.









