
ಮಡಿಕೇರಿ ಏ.28 NEWS DESK : ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದ ಐತಿಹಾಸಿಕ ಹಿನ್ನೆಲೆಯ ಶ್ರೀ ಅರ್ಧನಾರೀಶ್ವರ ದೇವಾಲಯದ ವಾರ್ಷಿಕೋತ್ಸವವು ಏ.27ರ ಸೋಮವಾರದಿಂದ ಆರಂಭಗೊಂಡಿದ್ದು, ಮೇ1 ರವರೆಗೆ ನಡೆಯಲಿದೆ. ಉತ್ಸವದ ಆರಂಭಿಕ ದಿನವಾದ ಇಂದು ಬೆಳಿಗ್ಗೆ ಬೊಟ್ಲಪ್ಪ ದೇವಾಲಯದಿಂದ ತೀರ್ಥವನ್ನು ತಂದು ಶ್ರೀ ಅರ್ಧನಾರೀಶ್ವರನಿಗೆ ಅಭಿಷೇಕ ಪೂಜೆ ನೆರವೇರಿತು. ಇದರೊಂದಿಗೆ ಗಣಪತಿ ಹೋಮ, ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ದೇವರ ಭಂಡಾರ ತರುವುದು, ದೇವರ ಬಲಿ, ಅಂದಿಬೆಳಕು , ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆದವು. ಏ.28 ರಂದು ಬೆಳಿಗ್ಗೆ 5 ಗಂಟೆಗೆ ದೇವರ ನೃತ್ಯ ಬಲಿ, 10 ಗಂಟೆಗೆ ಹಬ್ಬದ ಕಟ್ಟು ಮುರಿಯುವುದು, ಮಹಾಪೂಜೆ, ದೇವರು ನೆರಪು ಬಲಿ ಬರುವುದು, ವಸಂತ ಪೂಜೆ, ದೇವರ ಶಯನ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ಹಾಗೂ ಸಂಜೆ 4 ಗಂಟೆಗೆ ದೇವರ ಜಳಕ ಕಾರ್ಯ ನಡೆಯಲಿದೆ. ದೇವರ ನೃತ್ಯ ಬಲಿ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಏ.29 ರಂದು ಬೆಳಗ್ಗೆ 10ಗಂಟೆಗೆ ಶುದ್ಧ ಕಲಶ, ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ, ಏ.30 ರಂದು ಸಂಜೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 6 ಗಂಟೆಗೆ ತೋತಬರುವುದು, ದೀಪ ತರುವುದು, ಮೇಲೇರಿಗೆ ಅಗ್ನಿ ಸ್ಪರ್ಶ ಕಾರ್ಯಗಳು ನಡೆಯಲಿದೆ. ಮೇ1 ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆ.10ಗಂಟೆಯಿಂದ ಮೇಲೇರಿ ಹಾಗೂ ಅಜ್ಜಪ್ಪ ದೈವದ ಕೋಲ, ಅನ್ನಸಂತರ್ಪಣೆ, ಮಧ್ಯಾಹ್ನ 2.30 ಗಂಟೆಗೆ ದೇವರಿಗೆ ಬೇಟೆ ಸಾಂಪ್ರದಾಯಿಕ ಆಚರಣೆಗಳು ನಡೆಯಲಿರುವುದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.









