
ಸೋಮವಾರಪೇಟೆ ಏ.30 NEWS DESK : ಮಣ್ಣು ಪರೀಕ್ಷೆ ಮಾಡದೇ ಕಾಫಿ ತೋಟಗಳಿಗೆ ರಸಾಯನಿಕ ಅಥವಾ ಸಾವಯವ ಗೊಬ್ಬರಗಳನ್ನು ಅಜಾಗರೂಕವಾಗಿ ಬಳಸುವುದರಿಂದ ಬೆಳೆಗಾರರು ಅನಾವಶ್ಯಕ ಖರ್ಚು ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ.ಚಂದ್ರಶೇಖರ್ ಎಚ್ಚರಿಸಿದರು. ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘ, ಕಾಫಿ ಬೆಳೆಗಾರರ ಸಂಘ ಹಾಗೂ ಭಾರತೀಯ ಕಾಫಿ ಮಂಡಳಿ ಮತ್ತು ಸಂಶೋಧನಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಕ್ಕಲಿಗರ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಮಣ್ಣು ಪರೀಕ್ಷೆ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರತಿ ತೋಟದ ಮಣ್ಣಿನ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಅದರ ಪ್ರಕಾರವೇ ಗೊಬ್ಬರದ ಪ್ರಮಾಣ ಮತ್ತು ಪ್ರಕಾರವನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ ಉತ್ಪಾದನೆ ಕುಸಿಯುವುದರ ಜೊತೆಗೆ ಹಣವೂ ವ್ಯರ್ಥವಾಗುತ್ತದೆ ಎಂದರು. ಮಣ್ಣಿನ ಪೋಷಕಾಂಶಗಳ ಸಮತೋಲನ ಕಾಪಾಡಿಕೊಳ್ಳುವುದು ಉತ್ತಮ ಇಳುವರಿಗೆ ಪ್ರಮುಖ ಅಂಶ ಎಂದು ಅವರು ತಿಳಿಸಿದರು. ಕಾರ್ಯಾಗಾರದಲ್ಲಿ ವಿಜ್ಞಾನಿ ನಾಡಾಫ್ ಮಣ್ಣಿನ ರಚನೆ, ಅದರ ಆರೋಗ್ಯ ಮತ್ತು ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಡಾ. ನಾಗರಾಜ್ ಗಿಡ ಸಂರಕ್ಷಣಾ ಕ್ರಮಗಳು ಹಾಗೂ ಕೀಟ-ರೋಗ ನಿಯಂತ್ರಣದ ಬಗ್ಗೆ ವಿವರಿಸಿದರು. ಯು.ಡಿ.ಆರ್. ಯೋಜನೆ ಕುರಿತು ಬಸವರಾಜ್ ಮಾಹಿತಿ ನೀಡಿದರೆ, ಕಾಫಿ ರಫ್ತು ಅವಕಾಶಗಳ ಬಗ್ಗೆ ಪ್ರಕೃತಿ ಹೊನ್ನಮ್ಮ ಮಾತನಾಡಿದರು. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಯಂ. ಲವ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಕೆಜಿಎಫ್ ನಿರ್ದೇಶಕರಾದ ಸಿ.ಕೆ. ಮಲ್ಲಪ್ಪ ಇದ್ದರು. ಕೊಡಗು ಜಿಲ್ಲಾ ಸಂಪರ್ಕ ಅಧಿಕಾರಿ ಬೋವಿ, ಸಂಘದ ಪದಾಧಿಕಾರಿ ತಿಲೋತ್ತಮೆ ನಂದಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. 45 ಕಾಫಿ ಬೆಳೆಗಾರರು ಭಾಗವಹಿಸಿ ತಮ್ಮ ತೋಟದ ಮಣ್ಣನ್ನು ಉಚಿತವಾಗಿ ಪರೀಕ್ಷಿಸಿಕೊಂಡರು.









