
ಮಡಿಕೇರಿ ಮೇ 3 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳಿಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತವಾಗಿರುವ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಗೆ ಇಂದು ವಿಧ್ಯುಕ್ತ ಚಾಲನೆ ನೀಡಲಾಯಿತು. ಹಾಸನದ ಅಬಕಾರಿ ಇಲಾಖೆ ಉಪ ಆಯುಕ್ತರಾದ ನಂಗಾರು ಸುಮಿತ್ರ ನಿಂಗರಾಜು ಅವರು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪಂದ್ಯಾವಳಿಗೆ ಉತ್ತಮ ಸ್ಪಂದನೆ ದೊರಕಿರುವುದು ಸಂತೋಷದ ವಿಚಾರ. ಎಲ್ಲ ಕುಟುಂಬಗಳನ್ನು ಬೆಸೆಯಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಹಿರಿಯರು ಕಿರಿಯರು ಎನ್ನುವ ಭೇದ ಭಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಪಂದ್ಯಾವಳಿ ಯಶಸ್ಸನ್ನು ಕಾಣಲೆಂದು ಹಾರೈಸಿದರು. ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ಹಾಗೂ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾರ್ಯನಿರತ ಪತ್ರಕರ್ತರ ಸಂಘ ಐದು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕೆ 84 ರನ್ ಕಲೆ ಹಾಕಿತ್ತು. ಬಳಿಕ ಬ್ಯಾಟ್ ಮಾಡಿದ ಕೊಡಗು ಗೌಡ ಯುವ ವೇದಿಕೆ ತಂಡ ಐದು ಓವರ್ ಗಳಲ್ಲಿ ನಾಲ್ಕು ವಿಕೇಟ್ ನಷ್ಟಕ್ಕೆ 66 ರನ್ ಗಳಿಸುವ ಮೂಲಕ ಸೋಲು ಅನುಭವಿಸಿತು. ಆ ಮೂಲಕ ಪ್ರದರ್ಶನ ಪಂದ್ಯದಲ್ಲಿ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ 18 ರನ್ ಗೆಲುವನ್ನುಸಾಧಿಸಿತು. ಕಾರ್ಯಕ್ರಮದಲ್ಲಿ ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಲಡಿ ಮನೋಜ್, ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ ಸೇರಿದಂತೆ ಗೌಡ ಯುವ ವೇದಿಕ ಪ್ರದಾಧಿಕಾರಿಗಳು ಸದಸ್ಯರು ಹಾಗೂ ವಿವಿಧ ಬಾಗದಿಂದ ಆಗಮಿಸಿದ ಗೌಡ ಕುಟುಂಬದ ಕ್ರೀಡಾಪಟುಗಳು ಹಾಜರಿದ್ದರು.









