
ಸೋಮವಾರಪೇಟೆ ಮೇ 4 NEWS DESK : ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರವೂ ಮುಂದುವರಿದಿದೆ. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಸರ್ಕಾರಿ ಜಾಗದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಜಾಗ ಒದಗಿಸುವಂತೆ ಒತ್ತಾಯಿಸಿ, ಧರಣಿ ನಡೆಸುತ್ತಿದ್ದಾರೆ. ಅಲ್ಲಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ಧರಣಿ ನಡೆಯುತ್ತಿರುವ ಪೈಸಾರಿ ಜಾಗವನ್ನು ಧರಣಿ ನಿರತರು ಕಂಡು ಹಿಡಿದಿದ್ದು, ಆ ಜಾಗದ ಆರ್‍ಟಿಸಿಯನ್ನು ತೆಗೆದು, ಆ ಜಾಗದಲ್ಲಿ ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ, ಕಂದಾಯ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಪೈಸಾರಿ ಜಾಗವನ್ನು ಅನೇಕರು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚುವಂತೆ ಸಂಬಂಧಪಟ್ಟವರಿಗೆ ಮನವಿ ಪತ್ರ ನೀಡಲಾಗುವುದು ಎಂದು ಕಾರ್ಮಿಕ ಸಂಘಟನೆ ಅಧ್ಯಕ್ಷ ಕೆ.ಮೊಣ್ಣಪ್ಪ ಹೇಳಿದರು. ಸುತ್ತಮುತ್ತಲಿನ ಗ್ರಾಮಗಳ ಸುಮಾರು 290 ಕ್ಕೂ ಹೆಚ್ಚು ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದಾರೆ. ಸೂರಿನ ನಿರೀಕ್ಷೆಯಲ್ಲಿ ಹೆಚ್ಚಿನ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಸೋಮವಾರ ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ. ತಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ಪ್ರತಿಭಟನೆಗಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಮತ್ತು ಮಾದಾಪುರ ಪೊಲೀಸ್ ಸಿಬ್ಬಂದಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. ಧರಣಿ ನಡೆಸುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಎಸಿಎಫ್ ಗೋಪಾಲ್ ತಿಳಿಸಿದ್ದಾರೆ. ಧರಣಿ ಸ್ಥಳದಲ್ಲೇ ಅಡುಗೆ ತಯಾರಿಸುತ್ತಿದ್ದಾರೆ. ಧರಣಿಯಲ್ಲಿ ಶಿವಪ್ಪ, ಸೋಮು, ಪಿ.ಕೆ.ಅನಂದ, ಬಿ.ಆರ್. ಸುದೀಪ್, ದಿವ್ಯ, ರವಿ, ಅಣ್ಣು, ಗೀತಾಮಣಿ, ಗೀತಾ, ಸೇರಿದಂತೆ ವಯಸ್ಸಾದ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದಾರೆ.









