
ಮಡಿಕೇರಿ ಮೇ 4 NEWS DESK : ಹರಕೆಯ ಹಣವನ್ನು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ 500 ರೂ. ಮುಖಬೆಲೆಯ ಒಂದು ಬಂಡಲ್ ಹಣವನ್ನು ಕಾರ್ಮಿಕರೊಬ್ಬರು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹರಕೆ ರೂಪದಲ್ಲಿ 500 ರೂ. ಮುಖಬೆಲೆಯ ಒಂದು ಬಂಡಲ್ ಹಣವನ್ನು ಪಾಲಿಬೆಟ್ಟ ದರ್ಗಾಕ್ಕೆ ಒಪ್ಪಿಸಲೆಂದು ಹುಂಡಿ ಗ್ರಾಮದ ನಿವಾಸಿ ಸಿ.ಎಂ.ನಿಯಾಸ್(46) ಎಂಬುವವರು ತೆರಳುತ್ತಿದ್ದಾಗ ಮಾರ್ಗದ ಮಧ್ಯೆ ಹಣದ ಬಂಡಲ್ ಬಿದ್ದು ಹೋಗಿತ್ತು. ಗೋಣಿಕೊಪ್ಪ ಮಾರ್ಗವಾಗಿ ಕುಶಾಲನಗರ ಕಡೆಗೆ ಹೋಗುತ್ತಿದ್ದ ಕುಶಾಲನಗರದ ನಿವಾಸಿ ಕೂಲಿ ಕಾರ್ಮಿಕ ಎಂ.ಷಂಶುದ್ದೀನ್ ಎಂಬುವವರಿಗೆ 500 ರೂ. ಮುಖ ಬೆಲೆಯ ಹಣದ ಬಂಡಲ್ ಬಿದ್ದು ಸಿಕ್ಕಿತ್ತು. ಈ ವಿಚಾರವನ್ನು ಅವರು ತಮ್ಮ ಸ್ನೇಹಿತ ಸಿದ್ದಾಪುರ ಆಟೋ ಚಾಲಕರ ಸಂಘದ ಕಾರ್ಯದರ್ಶಿ ಗಿರೀಶ್ ಅವರಿಗೆ ತಿಳಿಸಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಆಗುವಂತೆ ನೋಡಿಕೊಂಡಿದ್ದರು. ಕೊಡಗು ಜಿಲ್ಲಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವ್ಯಾಟ್ಸ್ ಅಪ್ ಗ್ರೂಪ್ ನಲ್ಲೂ ಮಾಹಿತಿ ಒದಗಿಸಿದ್ದರು. ಸೂಕ್ತ ದಾಖಲಾತಿ ನೀಡಿದರೆ ಕುಶಾಲನಗರ ಪೊಲೀಸ್ ಠಾಣೆಯ ಮೂಲಕ ಮಾಲೀಕರಿಗೆ ಹಣ ಮರಳಿಸುವುದಾಗಿ ತಿಳಿಸಿದ್ದರು. ಹಣ ಕಳೆದುಕೊಂಡ ಸಿ.ಎಂ.ನಿಯಾಸ್ ಅವರು ವಿಚಾರ ತಿಳಿದು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಎಂ.ಷಂಶುದ್ದೀನ್ ಅವರು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಿ.ಎಂ.ನಿಯಾಸ್ ಅವರಿಗೆ ಹಣವನ್ನು ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದರು. ವೃತ್ತ ನಿರೀಕ್ಷಕ ಪ್ರದೀಪ್, ಎಎಸ್‍ಐ ನಂದ ಐ.ಪಿ ಹಾಗೂ ಸಿಬ್ಬಂದಿಗಳು ಎಂ.ಷಂಶುದ್ದೀನ್ ಅವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.









