
ಮಡಿಕೇರಿ ಮೇ 5 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿಯ ಇಕ್ಷಾ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಇಕ್ಷಾ ಆಸ್ಪತ್ರೆಯಲ್ಲಿ ನೇತ್ರ ತಜ್ಞ ಡಾ. ಅಜ್ಜಿನಿಕಂಡ ಚಿಣ್ಣಪ್ಪ ನೇತೃತ್ವದ ವೈದ್ಯಕೀಯ ತಂಡದವರು ಪತ್ರಕರ್ತರ ಕಣ್ಣಿನ ತಪಾಸಣೆ ನಡೆಸಿದರು. 25ಕ್ಕೂ ಹೆಚ್ಚು ಪತ್ರಕರ್ತರು ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಡಾ. ಚಿಣ್ಣಪ್ಪ, ಪ್ರತಿಯೊಬ್ಬರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಮೊಬೈಲ್ ಹಾಗೂ ಗಣಕಯಂತ್ರ ಬಳಕೆಯಿಂದ ದೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಎಚ್ಚರಿಕೆ ಅತ್ಯವಶ್ಯಕ ಎಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ಉಪಾಧ್ಯಕ್ಷ ನವೀನ್ ಸುವರ್ಣ, ಕುಶಾಲನಗರ ತಾಲೂಕು ಘಟಕ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









