
ಮಡಿಕೇರಿ ಮೇ 6 NEWS DESK : ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಹಾತೂರು ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡೋತ್ಸವಕ್ಕೆ ತೆರೆ ಎಳೆಯಲಾಯಿತು. ಕ್ರಿಕೆಟ್, ಥ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು. ಜನಾಂಗ ಬಾಂಧವರು ಉತ್ಸಾಹದಿಂದ ಭಾಗವಹಿಸಿದ್ದರು. :: ಹಿರಿಯರ ಕ್ರಿಕೆಟ್ : ಪಂದ್ಯದ ಫೈನಲ್ ನಲ್ಲಿ ಹಾತೂರು ತಂಡ, ಕಳೆದ ಬಾರಿಯ ಚಾಂಪಿಯನ್ ಹಾಲುಗುಂದ ತಂಡವನ್ನು ಸೋಲಿಸಿ ಈ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿತು. ಟಾಸ್ ಗೆದ್ದ ಹಾತೂರು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು, ಹಾಲುಗುಂದ ತಂಡವನ್ನು 56 ರನ್‌ಗಳಿಗೆ ಆಲ್‌ಔಟ್ ಮಾಡಿತು. ಪ್ರತಿಯಾಗಿ ಹಾತೂರು ತಂಡ 1.4 ಓವರ್ ಬಾಕಿ ಇರುವಾಗಲೇ 57 ರನ್ ಗುರಿ ತಲುಪಿ ಸುಲಭ ಜಯ ಸಾಧಿಸಿತು. :: ಹಾಲುಗುಂದ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.: ಕಿರಿಯರ ಕ್ರಿಕೆಟ್ ನಲ್ಲಿ ಪೊನ್ನಂಪೇಟೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬಿಟ್ಟಂಗಾಲ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. :: ಮಹಿಳೆಯರ ಪ್ರೋಬಾಲ್ :: ಮಹಿಳೆಯರ ವಿಭಾಗದಲ್ಲಿ ಪಾರಣೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕುಶಾಲನಗರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. :: ಹಗ್ಗಜಗ್ಗಾಟ :: ಮಹಿಳೆಯರ ವಿಭಾಗದಲ್ಲಿ ಹಾತೂರು ಪ್ರಥಮ, ಒಂಟಿಯಂಗಡಿ ದ್ವಿತೀಯ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿಯೂ ಹಾತೂರು ತಂಡವೇ ಪ್ರಥಮ ಸ್ಥಾನ ಪಡೆದುಕೊಂಡು, ಹಾಲುಗುಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. :: ಸನ್ಮಾನ ಕಾರ್ಯಕ್ರಮ :: ಕ್ರೀಡೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕೃಷಿ ಇಲಾಖೆಯ ರಾಜ್ಯ ಪ್ರಶಸ್ತಿ ವಿಜೇತರಾದ ಪಂದಿಕಂಡ ಜಯ ಬೋಪಣ್ಣ, ಪಡಿಞರಂಡ ವೇಣುಕುಮಾರ್, ರಾಷ್ಟ್ರೀಯ ವೆಟ್ರನ್ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ ಮೂರೀರ ಶಾಂತಿ ಬೆಳ್ಯಪ್ಪ ಹಾಗೂ ಅಚ್ಚಪಂಡ ಟೀನಾ ಸೋಮಣ್ಣ ಅವರನ್ನು ಗೌರವಿಸಲಾಯಿತು. :: ಸಮಾರೋಪ ಸಮಾರಂಭ ::
ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಮಾಜದ ಒಗ್ಗಟ್ಟಿಗೆ ಕ್ರೀಡೋತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಹೇಳಿದರು. ಯುವಪೀಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ತುದಿಮಾಡ ಸವಿ ಲೋಕೇಶ್ ಮಾತನಾಡಿ, ವಾರ್ಷಿಕ ಕ್ರೀಡೋತ್ಸವದ ಮೂಲಕ ಸಮಾಜ ಬಾಂಧವರು ಒಂದೆಡೆ ಸೇರುವುದು ಆಶಾದಾಯಕ ಬೆಳವಣಿಗೆ ಎಂದರು. ನಿಕಟಪೂರ್ವ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಮಾತನಾಡಿ, ಸಮಾಜವನ್ನು ಕಟ್ಟುವಲ್ಲಿ ಹಿರಿಯರ ಪಾತ್ರ ಮಹತ್ತರವಾಗಿದ್ದು, ಮುಂದಿನ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಎಂದರು. ವೇದಿಕೆಯಲ್ಲಿ ಟ್ರೋಫಿ ದಾನಿಗಳು, ಸಮಾಜದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ಪಂದಿಕಂಡ ನಾಗೇಶ್ ನಿರೂಪಿಸಿದರು. ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ ವಂದಿಸಿದರು. ತೀರ್ಪುಗಾರರಾಗಿ ಗಣೇಶ್, ಸಾಗರ್ ಪೂವಣ್ಣ, ಚರ್ಮಂಡ ಹರ್ಷ, ತೋರೆರ ಉಮೇಶ್ ಸೇರಿದಂತೆ ಇತರರು ಕಾರ್ಯನಿರ್ವಹಿಸಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿ ಕೊಂಗೆಪಂಡ ಯಶಿಕ ರಮೇಶ್ ಅವರ ಭರತನಾಟ್ಯ ಕಾರ್ಯಕ್ರಮ ಗಮನ ಸೆಳೆಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









