
ಮಡಿಕೇರಿ ಮೇ 7 NEWS DESK : ಸುಂಟಿಕೊಪ್ಪದಲ್ಲಿ ಮೇ ಕೊನೆಯ ವಾರದಲ್ಲಿ ಆಯೋಜಿತವಾಗಿರುವ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ, ಕತೆಗಾರ ಅಬ್ದುಲ್ ರಶೀದ್ ಆಯ್ಕೆಯಾಗಿದ್ದಾರೆ. ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನವು ಸುಂಟಿಕೊಪ್ಪದಲ್ಲಿ ಮೇ.29 ಮತ್ತು 30 ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ರಶೀದ್ ಅವರು ಕನ್ನಡದ ಬರಹಗಾರರು, ಕವಿ ಮತ್ತು ಅನುವಾದಕ. 2004ರಲ್ಲಿ ಅವರು ಜೀವಮಾನ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಅಬ್ದುಲ್ ರಶೀದ್ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾಗಿದ್ದರು. ಇವರು ಕಳೆದ 2025ನೇ ಸಾಲಿನ ಫೆs.28ರಂದು ಮೈಸೂರು ಆಕಾಶವಾಣಿಯಿಂದ ಸೇವಾ ನಿವೃತ್ತಿಯಾಗಿರುತ್ತಾರೆ. ಅವರು ಕನ್ನಡದ ಜನಪ್ರಿಯ ಆನ್‍ಲೈನ್ ನಿಯತಕಾಲಿಕೆಗಳಾದ “ಕೆಂಡಸಂಪಿಗೆ” ಮತ್ತು “ಮೈಸೂರುಪೋಸ್ಟ್” ನ ಸಂಪಾದಕರಾಗಿದ್ದಾರೆ. ವಿದ್ಯಾಭೂಷಣರಂತಹ ಕನ್ನಡದ ಖ್ಯಾತ ಕಲಾವಿದರ ಜೀವನಗಾಥೆಯನ್ನು ತಮ್ಮ ಬ್ಲಾಗ್‍ಗಳಲ್ಲಿ ಬರೆದಿದ್ದಾರೆ. ರಶೀದ್ ಅವರು ಎರಡು ಕಾದಂಬರಿಗಳು, ನಾಲ್ಕು ಸಣ್ಣ ಕಥೆಗಳ ಪುಸ್ತಕಗಳು, ನಾಲ್ಕು ಸೃಜನಶೀಲ ಪ್ರಬಂಧಗಳು ಮತ್ತು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.









