
ಮಡಿಕೇರಿ NEWS DESK ಮೇ 9 : ಕೊಡಗಿನ ಕ್ರೀಡಾಪಟುಗಳನ್ನು ಒಳಗೊಂಡ ಕರ್ನಾಟಕ ತಂಡ ರಾಷ್ಟçಮಟ್ಟದ ಸೆಸ್ಟೋಬಾಲ್ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಚಿನ್ನವನ್ನು ಗೆದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತೆಲಂಗಾಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಕ್ವಾಟರ್ ಫೈನಲ್ ನಲ್ಲಿ ವಿದರ್ಭ ತಂಡವನ್ನು 21-18 ರ ಅಂತರದಲ್ಲಿ ಮಣಿಸಿತು. ಸೆಮಿಫೈನಲ್ ನಲ್ಲಿ 18-40 ಭಾರೀ ಅಂತರದಿoದ ಗೆಲುವು ದಾಖಲಿಸಿತು. ನಂತರ ನಡೆದ ಅಂತಿಮ ಪಂದ್ಯದಲ್ಲಿ ಪಂಜಾಬ್ ವಿರುದ್ಧ 58-30 ಅಂತರದಲ್ಲಿ ಜಯಗಳಿಸುವ ಮೂಲಕ ಕರ್ನಾಟಕ ಬಾಲಕರ ತಂಡ 4ನೇ ಸಬ್ ಜೂನಿಯರ್ ಪಂದ್ಯಾಟದ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಬಾಲಕಿಯರ ತಂಡ ಮೊದಲಿಗೆ ಕೇರಳದ ವಿರುದ್ಧ ಎಡವಿದರೂ ನಂತರದಲ್ಲಿ ತೆಲಂಗಾಣ ತಂಡದ ಮೇಲೆ ಸಮಬಲವನ್ನು ಸಾಧಿಸಿತು. ಅಸ್ಸಾಂ, ಚಂಡೀಗಡ್ ತಂಡದ ಮೇಲೆ ಅತೀ ಹೆಚ್ಚಿನ ಅಂಕ ಪಡೆದು ಸೆಮಿಫೈನಲ್ ಪಂದ್ಯಾಟಕ್ಕೆ ಆಯ್ಕೆಯಾಗಿ ಬಲಿಷ್ಠ ತಮಿಳುನಾಡು ತಂಡವನ್ನು ಮಣಿಸಿತು. ಅಂತಿಮ ಪಂದ್ಯಾಟದಲ್ಲಿ ಆಂಧ್ರಪ್ರದೇಶ ತಂಡವನ್ನು ಸೋಲಿಸಿ 4ನೇ ಸಬ್ ಜೂನಿಯರ್ ಪಂದ್ಯಾಟದ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕರ್ನಾಟಕ ತಂಡದ ತರಬೇತುದಾರರಾಗಿ ಕುಶಾಲನಗರದ ಜಾನ್ಸನ್, ಸಹಾಯಕರಾಗಿ ಕುಶಾಲನಗರದ ಮಂಜುನಾಥ್ ಹಾಗೂ ಚಂದ್ರಶೇಖರ್ ಕಾರ್ಯನಿರ್ವಹಿಸಿದರು. ಕರ್ನಾಟಕ ಬಾಲಕರ ತಂಡದ ನಾಯಕನಾಗಿ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜ್ ನ ದಿನೇಶ್ ಹಾಗೂ ಬಾಲಕಿಯರ ತಂಡದ ನಾಯಕಿಯಾಗಿ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸಂಜನಾ ತಂಡವನ್ನು ಮುನ್ನಡೆಸಿದರು. ಬಾಲಕರ ತಂಡದಲ್ಲಿ ಚಿರಾಂತ್, ರಿಯಾನ್, ಜೀವನ್, ಚಂದನ್, ಸುಹಾನ್, ಸುಖೇವ್, ಆಲ್ವೀನ್, ತರುಣ್, ಗೌತಮ್, ಹರ್ಷ್, ಚಂದನ್, ಹೇಮಂತ್, ಮಿಷಬ್ ಹಾಗೂ ಬಾಲಕಿಯರ ವಿಭಾಗದಲ್ಲಿ ಭವಿಷ್ಯ, ಜಾಸ್ಮಿನ್, ದೀಪ್ತಿ, ಆರುಂಧತಿ, ಚಸ್ಮಿತಾ, ಶಾರ್ಲಿನ್, ಭುವನ, ಸೂಪಿಯಾ, ಧನ್ಯ, ಹೋನಲ್ ಮತ್ತು ಚೈತನ್ಯ ಪಾಲ್ಗೊಂಡಿದ್ದರು. ಕರ್ನಾಟಕ ತಂಡದ ವಿದ್ಯಾರ್ಥಿಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಸಮವಸ್ತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು. ಕ್ರೀಡಾಕೂಟದಲ್ಲಿ ವಿವಿಧ ರಾಜ್ಯಗಳ ಹಲವು ತಂಡಗಳು ಭಾಗವಹಿಸಿದ್ದವು. ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಸೆಸ್ಟೋಬಾಲ್ ಕ್ರೀಡೆಯನ್ನು ಕರ್ನಾಟಕಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸಬ್ ಜೂನಿಯರ್ ಬಾಲಕ ಬಾಲಕಿಯರ ತಂಡವನ್ನು ರಚಿಸಿ ತರಬೇತಿ ನೀಡಲಾಯಿತು.









